ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಸೂಚನೆ

Published on

ವಿರಾಜಪೇಟೆ: ಕೋವಿಡ್ ರೂಪಾಂತರಿ ವೈರಾಣು ತೀರಾ ಅಪಾಯಕಾರಿ ಅಲ್ಲದಿದ್ದರೂ ಜನರು ಜಾಗ್ರತೆ ವಹಿಸಬೇಕು. ತಕ್ಷಣ ಎಲ್ಲರೂ ಬೂಸ್ಟರ್ ಡೋಸ್ ಲಸಿಕೆ ಪಡೆಯಬೇಕು. ವಿರಾಜಪೇಟೆ ಸರ್ಕಾರಿ ಆಸ್ವತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಮುನ್ನೆಚ್ಚರಿಕೆಯಾಗಿ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಹೇಳಿದರು.
ನಮ್ಮಲ್ಲಿ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ. ಎರಡು ಲಸಿಕೆ ಹಾಕಿಸಿಕೊಂಡವರು ಬೂಸ್ಟರ್ ಡೋಸ್ ಪಡೆಯಬಹುದು. ಕೋವಿಶೀಲ್ಡ್ ಲಸಿಕೆಯನ್ನು ಶೀಘ್ರ ಪೂರೈಕೆ ಮಾಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ. ಐಸಿಯುನಲ್ಲಿ 24 ಆಕ್ಸಿಜನ್ ಹಾಸಿಗೆ, ಸಾಮಾನ್ಯ ವಾರ್ಡಿನಲ್ಲಿ 72 ಆಕ್ಸಿಜನ್ ಇರುವ ಹಾಸಿಗೆಗಳನ್ನು ಕೋವಿಡ್ ಪೀಡಿತರಿಗೆ ಮೀಸಲಿಡಲಾಗಿದೆ. ಆಸ್ಪತ್ರೆಯ ಆವರಣದಲ್ಲಿರುವ ಆಕ್ಸಿಜನ್ ಘಟಕವನ್ನು ಚಾಲನೆ ಮಾಡಲಾಗಿದ್ದು, ಆಕ್ಸಿಜನ್‌ಗೆ ಕೊರತೆ ಇಲ್ಲ. 448 ಪಿಪಿ ಕಿಟ್, ಮಾಸ್ಕ್ ಸೇರಿದಂತೆ ಔಷಧಗಳು ಲಭ್ಯ ಇದ್ದು, ಒಂದು ತಿಂಗಳ ಬಳಕೆಗೆ ಅಗತ್ಯ ದಾಸ್ತಾನು ಇದೆ ಎಂದು ‘ವಿಜಯವಾಣಿ’ಗೆ ಮಾಹಿತಿ ನೀಡಿದರು.
ಕೋವಿಡ್ ರೋಗಿಗಳಿಗೆ ಅಗತ್ಯ ಸೇವೆಗೆ ಯಾವುದೇ ತೊಂದರೆ ಇಲ್ಲ. ಅಗತ್ಯ ಬಿದ್ದರೆ ರೋಗಿಗಳಿಗೆ ತುರ್ತು ಚಿಕಿತ್ಸಾ ವಾಹನ, 108 ಸೇವೆ ವಾಹನ , ನಗುಮಗು ವಾಹನ ಸೇರಿದಂತೆ ಮೂರು ತುರ್ತು ಚಿಕಿತ್ಸಾ ವಾಹನ ಬಳಕೆಗೆ ಲಭ್ಯವಿದೆ. ರೂಪಾಂತರಿ ವೈರಸ್ ಬೇಗನೆ ಹರಡಿದರೂ ಅಂತಹ ತೀವ್ರತೆ ಇಲ್ಲ. ಆದರೂ ನಿಯಮದಂತೆ ಪರಸ್ಪರ ಅಂತರ ಪಾಲನೆ ಹಾಗೂ ಸಮಾರಂಭದಲ್ಲಿ ಮಾಸ್ಕ್ ಧರಿಸಬೇಕು. ಯಾವುದೇ ತೊಂದರೆ ಕಾಣಿಸಿಕೊಂಡರೂ ವೈದ್ಯರ ಸಲಹೆ ಪಡೆಯಬೇಕು ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net