ಬೂದುಬಾಳಿನಲ್ಲಿ ವಿಜೃಂಭಣೆಯ ಬ್ರಹ್ಮ ರಥೋತ್ಸವ

07 HANUR 1
????????????????????????????????????
Published on

ಹನೂರು: ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಬೂದುಬಾಳು ಗ್ರಾಮದ ಶ್ರೀ ಗುಡಿಹಟ್ಟಿ ವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು-ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ಸಿಂಗರಿಸಲಾಗಿತ್ತು. ಸೋಮವಾರ ರಾತ್ರಿ 7.30ರಲ್ಲಿ ದೇಗುಲದಲ್ಲಿ ಗಜೇಂದ್ರ ಮೋಕ್ಷ ಧಾರ್ಮಿಕ ಕೈಂಕರ್ಯದ ವಿಶೇಷ ಪೂಜೆಯನ್ನು ನೆರವೇರಿಸುವುದರ ಮೂಲಕ 5 ದಿನಗಳ ಜಾತ್ರೆಗೆ ಚಾಲನೆ ನೀಡಲಾಯಿತು.

ಮಂಗಳವಾರ ಮಹಾ ರಥೋತ್ಸವದ ಅಂಗವಾಗಿ ಬೆಳಗ್ಗೆ ದೇಗುಲದಲ್ಲಿ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. 9.30ರಲ್ಲಿ ಸಿಂಗಾನಲ್ಲೂರು ಗ್ರಾಮಸ್ಥರು ಹಾಗೂ ದೇವರುಗುಡ್ಡರು ಸಂಪ್ರದಾಯದಂತೆ ಗ್ರಾಮದ ಹೊರವಲಯದಲ್ಲಿನ ನಾರಾಯಣಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಕಂಡಾಯ, ಸತ್ತಿಗೆ ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ಆಗಮಿಸಿ ತೇರಿನ ಸುತ್ತ ಪ್ರದಕ್ಷಿಣೆ ಹಾಕಿದರು. 10 ಗಂಟೆಯಲ್ಲಿ ಸ್ವಾಮಿಯ ವಿಗ್ರಹ ಮೂರ್ತಿಯನ್ನು ತೇರಿನ ಸುತ್ತ 3 ಬಾರಿ ಪ್ರದಕ್ಷಿಣೆ ಹಾಕಿ ವಿವಿಧ ಪುಷ್ಪ ಹಾಗೂ ಬಣ್ಣ ಬಣ್ಣದ ಬಟ್ಟೆಗಳಿಂದ ಸಿಂಗರಿಸಲಾಗಿದ್ದ ತೇರಿನಲ್ಲಿ ಕೂರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ವಿಜೃಂಭಣೆಯ ರಥೋತ್ಸವ: ಮೇಲ್ಭಾಗದಲ್ಲಿ ಗರುಡವೊಂದು ತೇರನ್ನು ಪ್ರದಕ್ಷಿಣೆ ಹಾಕಿದ ಬಳಿಕ 11.10 ರಲ್ಲಿ ಛತ್ರಿ, ಚಾಮರ, ಸತ್ತಿಗೆ, ಸೂರಿಪಾನಿ, ನಗಾರಿ, ತಮಟೆ, ಶಂಖ ಹಾಗೂ ವಾದ್ಯಗಳ ಶಬ್ದಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಭಕ್ತರು ತೇರನ್ನು ಎಳೆಯಲು ಮುಗಿ ಬಿದ್ದರು. ಪೋಲಿಸರು ಜನರನ್ನು ನಿಯಂತ್ರಿಸಲು ಹರಸಹಾಸಪಟ್ಟರು. ದೇಗುಲದ ಮುಂಭಾಗದಿಂದ ತುಸು ದೂರ ತೇರನ್ನು ಎಳೆಯಲಾಯಿತು. ಈ ವೇಳೆ ಭಕ್ತರು ವೆಂಕಟರಮಣಸ್ವಾಮಿ ಗೋವಿಂದ ಗೋವೀಂದಾ ಎಂದು ಜಯಘೋಷವನ್ನು ಮೊಳಗಿಸುತ್ತಾ ತೇರನ್ನು ಉತ್ಸಾಹದಿಂದ ಎಳೆದು ಪುನೀತರಾದರು. ದೇವರಗುಡ್ಡರು ಜಾಗಟೆ ಸದ್ದು ಮಾಡುತ್ತಾ, ಶಂಖ ಊದುತ್ತಾ ಭಕ್ತಿ ಪರವಶವಾದರು. ಭಕ್ತರು ಹಾಗೂ ನವದಂಪತಿಗಳು ತೇರಿಗೆ ಹಣು ದವನ, ಧನ-ಧಾನ್ಯ ಎಸೆದರು. ಈ ವೇಳೆ ಶಾಸಕ ಆರ್.ನರೇಂದ್ರ ಪತ್ನಿ ಆಶಾ, ಪುತ್ರ ನವನೀತ್‌ಗೌಡ ಭಾಗಿಯಾಗಿ ದೇವರ ದರ್ಶನ ಪಡೆದರು.
ದೇವರ ದರ್ಶನ ಪಡೆದ ಭಕ್ತರು: ಭಕ್ತರು ದೇಗುಲದ ಮುಂಭಾಗ ಧೂಪ ಹಾಕಿ ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ಮುಡಿಸೇವೆ ಸಲ್ಲಿಸಿದರು. ರಥೋತ್ಸವದಲ್ಲಿ ಚಾಮರಾಜನಗರ ಸೇರಿದಂತೆ ಮೈಸೂರು, ಮಂಡ್ಯ, ಕುರಟ್ಟಿಹೊಸೂರು, ದಂಟಳ್ಳಿ, ಮಾರ್ಟಳ್ಳಿ, ರಾಮಾಪುರ, ಕೌದಳ್ಳಿ, ಶಾಗ್ಯ, ಒಡೆಯರಪಾಳ್ಯ, ಲೊಕ್ಕನಹಳ್ಳಿ, ಭೈರನತ್ತ, ಹನೂರು ಸೇರಿ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಮಜ್ಜಿಗೆ, ಪಾನಕ, ಅನ್ನಸಂತರ್ಪಣೆ: ಭಕ್ತರಿಗೆ ಗ್ರಾಮಸ್ಥರು ವೀರಾಂಜನೇಯಸ್ವಾಮಿ ದೇಗುಲ ಸೇರಿದಂತೆ ಗ್ರಾಮದ ಅಲ್ಲಲ್ಲಿ ಮಜ್ಜಿಗೆ, ಪಾನಕಗಳನ್ನು ವಿತರಿಸಿದರು. ದಾನಿಗಳು ಅಲ್ಲಲ್ಲಿ ಅನ್ನ ಸಂತರ್ಪಣೆ ನಡೆಸಿದರು. ದೇವಾಲಯದ ವತಿಯಿಂದ ಪ್ರಸಾದ ವಿತರಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

7ಕೆಜಿಎಲ್2

7ಕೆಜಿಎಲ್3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net