

ಶಿಕಾರಿಪುರ: ಸಾಮಾನ್ಯ ಕಾರ್ಯಕರ್ತನೂ ಬಿಜೆಪಿ ಆಸ್ತಿ. ಪಕ್ಷ ಕಟ್ಟಿದ ಹಿರಿಯರು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಮಾಡಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಸಮೀಪದ ಹೊಸೂರು ವೀರಭದ್ರೇಶ್ವರ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಪಕ್ಷ ಸಂಘಟನಾ ಸಭೆಯಲ್ಲಿ ಮಾತನಾಡಿ, ಪ್ರತಿ ಬೂತ್‌ನ ಪ್ರಮುಖರ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ಇಡೀ ಬೂತ್‌ನಲ್ಲಿ ಹೆಚ್ಚಿನ ಮತ ಬರುವಂತೆ ಅವರೇ ಸಂಪರ್ಕ ಮಾಡಬೇಕು. ಅಗತ್ಯ ಬಿದ್ದರೆ ಶಕ್ತಿ ಕೇಂದ್ರದ ನಾಯಕರು ಮತ್ತು ಮಹಾಶಕ್ತಿ ಕೇಂದ್ರದ ಪ್ರಮುಖರನ್ನು ಕರೆಸಿ ಮತದಾರರಲ್ಲಿ ವಿಶ್ವಾಸ ಮೂಡಿಸಬೇಕು. ಸಣ್ಣಪುಟ್ಟ ಕಾರಣಗಳಿಂದ ದೂರವಾದ ಮತದಾರರ ಬಳಿ ಹೋಗಬೇಕು ಎಂದರು.
ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಯೋಜನೆಗಳನ್ನು, ಆಗಿರುವ ಮತ್ತು ಆಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ಮನನ ಮಾಡಿಸಬೇಕು. ಬೂತ್‌ಗಳು ಗಟ್ಟಿಯಾದರೆ ಮಾತ್ರ ಪಕ್ಷ ಗಟ್ಟಿಯಾಗುವುದು ಎಂದರು.
ಬರಗಾಲದಿಂದ ಕಂಗಾಲಾಗಿದ್ದ ರೈತರ ಬದುಕು ಹಸನಾಗಲು ಶಾಶ್ವತ ನೀರಾವರಿ ಯೋಜನೆ ಮೂಲಕ 1500 ಕೋಟಿ ರೂ. ವೆಚ್ಚದಲ್ಲಿ 250ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗಿದೆ. ಇದರಿಂದ ಕೊಳವೆಬಾವಿಗಳು ರೀಚಾರ್ಜ್ ಆಗಿ ಕೃಷಿಗೆ ಅನುಕೂಲವಾಗಿದೆ. ರೈತರು ಆರ್ಥಿಕ ಬೆಳೆಗಳತ್ತ ಮುಖ ಮಾಡಿದ್ದಾರೆ. ವರ್ಷಕ್ಕೆ 5000 ಎಕರೆಯಷ್ಟು ಹೊಸ ತೋಟಗಳಾಗುತ್ತಿವೆ ಎಂದು ಹೇಳಿದರು.
ಶಿಕಾರಿಪುರದ ಸಂಪರ್ಕವಿಲ್ಲ ಎಂದು ಅಪಪ್ರಚಾರ:
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ವಿರೋಧ ಪಕ್ಷದವರು ನಾನು ಬೆಂಗಳೂರಿನಲ್ಲಿದ್ದೇನೆ, ಶಿಕಾರಿಪುರದ ಸಂಪರ್ಕ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ತಂದೆಯವರು ಸಿಎಂ ಆದಾಗ, ಮಗನಾಗಿ ನಾನು ಅವರೊಂದಿಗೆ ಇರಬೇಕಿತ್ತು.ನನಗೆ ಪಕ್ಷದ ಪ್ರಾಂತಮಟ್ಟದ ಜವಾಬ್ದಾರಿ ಇರುವುದರಿಂದ ಅಲ್ಲಿರಬೇಕಾಯಿತು. ಬರುವ ದಿನಗಳಲ್ಲಿ ಶಿಕಾರಿಪುರದಲ್ಲಿಯೇ ಇದ್ದು, ನಿಮ್ಮ ಸಮಸ್ಯೆಗಳಿಗೆ ದನಿಯಾಗುತ್ತೇನೆ ಎಂದರು.