

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಕೇಂದ್ರದಲ್ಲಿ ಸರ್ಕಾರ ರಚನೆ ಬೆನ್ನಲ್ಲೇ ಭಾರತೀಯ ಜನತಾ ಪಕ್ಷ ಚುನಾವಣೋತ್ತರ ಪಕ್ಷದ ಬಲವರ್ಧನೆಯತ್ತ ದೃಷ್ಟಿ ನೆಟ್ಟಿದೆ.
ಬೂತ್ ಮಟ್ಟದಿಂದ ಪಕ್ಷವನ್ನು ಮತ್ತಷ್ಟು ಮಜಬೂತ್‌ಗೊಳಿಸಲು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಸಂಘಟನಾ ಪರ್ವ ಆಯೋಜಿಸಲಾಗುತ್ತದೆ. ಈ ಬಾರಿ ಎಂದಿನಿಂದ ಆರಂಭಿಸಬೇಕೆಂಬುದನ್ನು ಬಿಜೆಪಿ ಕೇಂದ್ರ ಮತ್ತು ರಾಜ್ಯ ನಾಯಕರು ತಿಳಿಸಲಿದ್ದಾರೆ. ದೇಶಾದ್ಯಂತ ಏಕಕಾಲಕ್ಕೆ ಅಥವಾ ಆಯಾ ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಸಂಘಟನೆ ಕಾರ‌್ಯ ನಡೆಯಲಿದೆ. ದೇಶದಲ್ಲಿ ಪ್ರಸ್ತುತ ಬಿಜೆಪಿ ಸದಸ್ಯರ ಸಂಖ್ಯೆ 18 ಕೋಟಿ ಇದ್ದು, ಇದನ್ನು 20-21 ಕೋಟಿಗೆ ಹೆಚ್ಚಿಸುವ ಗುರಿ ಇದೆ.
ಪಕ್ಷದ ಬಲವರ್ಧನೆಗೆ, ಕಾರ‌್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ವಿವಿಧ ಹಂತಗಳ ನೇಮಕದಲ್ಲಿ ಹೊಸಬರಿಗೆ ಆದ್ಯತೆ ದೊರೆಯುವ ನಿರೀಕ್ಷೆ ಇದೆ.
ನಾಲ್ಕು ನೂರು ಸೀಟು ಗೆಲ್ಲುವ ಗುರಿಯೊಂದಿಗೆ ಲೋಕಸಭೆ ಚುನಾವಣೆ ಎದುರಿಸಿದ್ದ ಬಿಜೆಪಿ, ನಿಚ್ಚಳ ಬಹುಮತ ಗಳಿಸುವಲ್ಲಿ ಎಡವಿದರೂ ಎನ್‌ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿದಿದೆ. ನರೇಂದ್ರ ಮೋದಿ ಅವರು 3 ನೇ ಬಾರಿಗೆ ಪ್ರಧಾನ ಮಂತ್ರಿಯಾಗಿದ್ದಾರೆ. ಆದರೆ ಲೋಕಸಭಾ ಫಲಿತಾಂಶದ ಬಗೆಗೆ ಕೇಂದ್ರೀಯ ನಾಯಕರಿಗೆ ಅಸಮಾಧಾನವಂತೂ ಇದ್ದೇ ಇದೆ. ಸಂಘಟನೆಯಲ್ಲಿ ಆಗಿರುವ ಲೋಪದೋಷಗಳನ್ನು ತುರ್ತು ಸರಿಪಡಿಸಿ, ಮುಂಬರುವ ತಾಪಂ, ಜಿಪಂ, ನಗರ ಸ್ಥಳೀಯ ಸಂಸ್ಥೆಗಳ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಜಯಭೇರಿ ಸಾಧಿಸುವುದು ಸದ್ಯದ ಸವಾಲಾಗಿದೆ.
ಮಿಸ್ಡ್ ಕಾಲ್
ಹೊಸ ಸದಸ್ಯತ್ವ ನೋಂದಣಿ ಮಾಡಿಸುವವರು ಪಕ್ಷದ ಕೇಂದ್ರ ಸಮಿತಿ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಮಿಸ್ಡ್‌ಕಾಲ್ ಕೊಡಬೇಕಾಗುತ್ತದೆ. ಈಗಾಗಲೇ ಸದಸ್ಯತ್ವ ನೋಂದಣಿಯಾಗಿದ್ದರೆ ಆ ಕುರಿತು ಮಾಹಿತಿ ರವಾನೆಯಾಗುತ್ತದೆ. ಬೂತ್ ಸಮಿತಿಗೆ ಹೊಸ ಸದಸ್ಯರು, ಅಧ್ಯಕ್ಷರು, ಶಕ್ತಿ ಕೇಂದ್ರಕ್ಕೆ ಸದಸ್ಯರು, ಅಧ್ಯಕ್ಷರು ಹಾಗೂ ಮಂಡಲ ಸಮಿತಿ ಸದಸ್ಯರು, ಅಧ್ಯಕ್ಷರ ನೇಮಕ ಹಾಗೂ ಜಿಲ್ಲಾ ಸಮಿತಿಗಳಿಗೂ ಹೊಸರೂಪ ಕೊಡುವ ಸಾಧ್ಯತೆ ಇದೆ.
ಕಳೆದ ವಿಧಾನಸಭಾ ಚುನಾವಣೆ ಬಳಿಕ ಪಕ್ಷದ ಸಂಘಟನಾತ್ಮಕ ಜಿಲ್ಲೆಗಳ ಪೈಕಿ ಹಲವೆಡೆ ಹೊಸ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ ವಾಗಿದ್ದರೆ, ಇನ್ನು ಕೆಲವೆಡೆ ಹಳಬರೇ ಮುಂದುವರಿದಿದ್ದಾರೆ. ರಾಷ್ಟ್ರೀಯ ಅಧ್ಯ ಕ್ಷ ಜೆ.ಪಿ.ನಡ್ಡಾ ಅವರು ಸಂಪುಟ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಬೇರೊಬ್ಬರ ನೇಮಕದ ಸಾಧ್ಯತೆ ಇದೆ. ಹೊಸ ಹುರುಪು, ಪಕ್ಕಾ ಪ್ಲಾನ್‌ನೊಂದಿಗೆ ಭವಿಷ್ಯದ ಚುನಾವಣೆಗಳನ್ನು ಎದುರಿಸಲು ಪಕ್ಷ ಸಜ್ಜಾಗತೊಡಗಿದೆ.
ಕೋಟ್
ಸಂಘಟನಾ ಪರ್ವ ನಿರಂತರ ನಾಲ್ಕು ವರ್ಷಗಳಿಗೊಮ್ಮೆ ನಡೆಯುವಂಥ ಚಟುವಟಿಕೆ. ಈ ಬಾರಿ ಎಂದಿನಿಂದ ಆರಂಭವಾಗಲಿದೆ ಎಂಬುದನ್ನು ಪಕ್ಷದ ಹಿರಿಯರು ತಿಳಿಸಲಿದ್ದು, ಸದ್ಯದಲ್ಲೇ ಹೊಸ ಸದಸ್ಯತ್ವ ನೋಂದಣಿ ಪ್ರಾರಂಭವಾಗಲಿದೆ.
ಕೆ.ಎಸ್.ನವೀನ್, ವಿಧಾನ ಪರಿಷತ್ ಸದಸ್ಯ, ಪಕ್ಷದ ರಾಜ್ಯ ವಕ್ತಾರ. ಚಿತ್ರದುರ್ಗ.
--