ಬುಧವಾರದಿಂದ ಜಿಲ್ಲೆಯಲ್ಲಿ ಕೊರೋನಾ ಪರೀಕ್ಷೆ; ಸಂಸದ ಶ್ರೇಯಸ್ ಪಟೇಲ್

27_HSN_02
Published on

ಹಾಸನ: ಎಲ್ಲೆಡೆ ಕೋವಿಡ್ ಮತ್ತೆ ಹರಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಆಸ್ಪತ್ರೆಗಳಲ್ಲಿ ಬೆಡ್‌ಗಳು ಮತ್ತು ಇತರೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮೇ 28ರ ಬುಧವಾರದಿಂದ ಕೊರೋನಾ ಪರೀಕ್ಷೆ ಶುರುವಾಗಲಿದೆ. ಯಾರು ಭಯಪಡದೇ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಬೇಕೆಂದು ಸಂಸದ ಶ್ರೇಯಸ್ ಎಂ. ಪಟೇಲ್ ಸಲಹೆ ನೀಡಿದರು.

ದಿನೇದಿನೆ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಗರದ ಸಾಲಗಾಮೆ ರಸ್ತೆ ಬಳಿ ಇರುವ ಜಿಲ್ಲಾ ಆರೋಗ್ಯ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂಸದ ಶ್ರೇಯಸ್ ಎಂ. ಪಟೇಲ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕಿನ ಆರೊಗ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಎಲ್ಲ ತಾಲೂಕಿನ ಆರೋಗ್ಯಾಧಿಕಾರಿಗಳ ಸಭೆ ಕರೆಯಲಾಗಿದ್ದು, ಕೋವಿಡ್-19 ಮತ್ತು ಡೆಂೆ ಬಗ್ಗೆ ಯಾವ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಬಗ್ಗೆ, ಕೋವಿಡ್‌ಗೆ ಇರುವ ಮಾನದಂಡಗಳ ಕುರಿತು ರಾಜ್ಯ ಸರ್ಕಾರವು ಹೇಳಿರುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಎಲ್ಲ ತಾಲೂಕಿಗೂ ಕೋವಿಡ್ ಪರೀಕ್ಷೆ ಮಾಡುವ ಕಿಟ್‌ಗಳನ್ನು ವಿತರಿಸುತ್ತಾರೆ. ಮಂಗಳವಾರ ಸಂಜೆ ಇಲ್ಲವೇ ಬುಧವಾರದಂದು ಕೋವಿಡ್ ಟೆಸ್ಟ್ ಶುರುವಾಗುತ್ತದೆ ಎಂದರು.

ರಾಜ್ಯದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿಯೂ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಮುಖವಾಗಿ ಹಾಸಿಗೆಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಕೋವಿಡ್‌ನ ಅಗತ್ಯ ಔಷಧಗಳನ್ನು ಲಭ್ಯವಾಗಿ ಇಟ್ಟುಕೊಳಬೇಕು, ಅಗತ್ಯ ಇದ್ದ ಔಷಧಗಳನ್ನು ಅತೀ ಶೀಘ್ರವಾಗಿ ಸರ್ಕಾರಕ್ಕೆ ಪತ್ರ ಬರೆದು ತರಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು. ಯಾವುದೇ ರೀತಿಯ ಔಷಧಗಳನ್ನು ಖಾಸಗಿ ಮೆಡಿಕಲ್‌ಗಳಿಗೆ ಬರೆಯಬಾರದು. ಎಲ್ಲವೂ ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ನೋಡಿಕೊಳ್ಳಬೇಕು. ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳು ಮತ್ತು ವಯೋವೃದ್ಧರು ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ರೋಗ ನಿರೋಧಕ ಶಕ್ತಿ ಇರುವ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಜನನಿಬಿಡ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಜನ ಸೇರುವುದನ್ನು ಆದಷ್ಟು ಕಡಿಮೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.

ಈ ವೇಳೆ ಯಾರು ಆತಂಕಕ್ಕೆ ಒಳಗಾಗುವುದು ಬೇಡ. ಮುನ್ನೆಚರಿಕ ಕ್ರಮವಾಗಿ ಎಲ್ಲರೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್‌ನಿಂದ ಕೈಯನ್ನು ಶುದ್ಧವಾಗಿ ತೊಳೆದುಕೊಳ್ಳಬೇಕು. ಕೋವಿಡ್ ಸಂಬಂಧ ಸರ್ಕಾರ ಸೂಚಿಸುವ ಮಾನದಂಢವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿದರೆ ಖಂಡಿತವಾಗಿಯೂ ಈ ಸಂಕಷ್ಟದಿಂದ ನಾವು ಪಾರಾಗಬಹುದು. ನಮ್ಮ ಜಿಲ್ಲೆಯ ಎಲ್ಲ ವೈದ್ಯರು ಸನ್ನದ್ಧರಾಗಿದ್ದು, ಬುಧವಾರದಿಂದಲೇ ಕೋವಿಡ್ ಪರೀಕ್ಷೆ ಮಾಡಲಾಗುವುದು. ಭಯ ಪಡುವುದಕ್ಕಿಂತ ಮುನ್ನೆಚರಿಕ ಕ್ರಮವನ್ನು ಅನುಸರಿಸುವುದು ಸೂಕ್ತ ಎಂದು ಹೇಳಿದರು.

ಮನೆ ಸುತ್ತ ಸ್ವಚ್ಛತೆ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕೋವಿಡ್ ಹರಡುತ್ತಿರುವ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಸಿದ್ಧತೆ ಮಾಡಲಾಗಿದ್ದು, ಕೋವಿಡ್ ವಾರ್ಡನ್ನು ನಿಗಧಿಪಡಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ಬೆಡನ್ನು ಐಸ್ಯೂಲೇಷನ್ ವಾರ್ಡಾಗಿ ರಿಸರ್ವ್ ಮಾಡಲಾಗಿದೆ. ಇಲ್ಲಿ ಆಕ್ಸಿಜನ್ ಕೊರತೆ ಇರುವುದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಮೆಡಿಸನ್ ಸಿದ್ಧಪಡಿಸಿಕೊಳ್ಳಲಾಗಿದ್ದು, ಯಾರು ಹೆದರಬೇಡಿ ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್, ಜಿಲ್ಲಾ ಶಸ್ತ್ರ ಚಿಕಿತ್ಸಕ ನಾಗಪ್ಪ, ಹಿಮ್ಸ್ ನ ರಾಘವೇಂದ್ರ, ಡಾ. ಚೇತನ್, ಸೇರಿದಂತೆ ಹಾಸನ ಜಿಲ್ಲೆಯಲ್ಲ ಎಲ್ಲಾ ತಾಲೂಕಿನ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net