ಬುದ್ಧಿಮಾಂದ್ಯ ಮಕ್ಕಳಿಂದ ಪರಿಸರ ದಿನಾಚರಣೆ

13
Published on

ಮೈಸೂರು: ವಿಜಯನಗರ 4ನೇ ಹಂತದಲ್ಲಿರುವ ಸಮರ್ಥನಂ ಬುದ್ಧಿ ವಿಕಲಚೇತನ ಶಾಲೆಯ ಬುದ್ಧಿಮಾಂದ್ಯ ಮಕ್ಕಳಿಂದ ಗಿಡ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.
ವಿದ್ಯಾರ್ಥಿ ವಿ.ಆರ್ಯನ್ ಗಿಡ ನೆಡಿ, ಗಿಡ ನೆಡಿ, ಮನೆಯ ಮುಂದೊಂದು ಗಿಡ ನೆಡಿ, ಮನೆಯ ಹಿಂದೊಂದು ಗಿಡ ನೆಡಿ, ನೆಟ್ಟ ಗಿಡಕೆ ನೀರು ಹಾಕಿ ಬಾಳುಕೊಡಿ ಎಂಬ ಹಾಡು ಹಾಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು.
ಮಹಾರಾಣಿ ಮಹಿಳಾ ವಿಜ್ಞಾನ (ಸ್ವಾಯತ್ತ) ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಗೋವಿಂದರಾಜು ಅವರು ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವ ಪರಿಸರ ದಿನಾಚರಣೆ ಹಸಿರಿನ ಮಹತ್ವವನ್ನು ಜಗತ್ತಿನೆಲ್ಲೆಡೆ ಸಾರುವ ದಿನ. ಆದರೆ ಕಾಡು ಪರಿಸರ ರಕ್ಷಣೆ ಕೇವಲ ಈ ದಿನಕ್ಕೆ ಸೀಮಿತವಾಗಿರಬಾರದು. ಪ್ರತಿದಿನ ನಾವು ಮಾಡುವ ಪ್ರತಿ ಕೆಲಸದಲ್ಲೂ ಪರಿಸರವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಹೆಚ್ಚು ಮರ, ಗಿಡಗಳನ್ನು ನೆಡುವುದು, ನೀರನ್ನು ಉಳಿಸುವುದು, ಮರುಬಳಕೆ ಮಾಡುವುದು, ವನ್ಯಜೀವಿಗಳು ಮತ್ತು ಪ್ರಾಣಿಗಳನ್ನು ಉಳಿಸುವುದು ಉತ್ತಮ ಪರಿಸರಕ್ಕೆ ನಾವು ಕೊಡಬಹುದಾದ ಕೊಡುಗೆ. ಅಲ್ಲದೇ, ನಾವು ಯಾವಾಗಲೂ ನಮ್ಮ ಚಟುವಟಿಕೆಗಳ ಬಗ್ಗೆ ಜಾಗೃತರಾಗಿರಬೇಕು. ಸುತ್ತಮುತ್ತಲಿನ ಸ್ವಚ್ಛತೆ ಮತ್ತು ಆರೋಗ್ಯಕರವಾಗಿರಲು ಶ್ರಮಿಸಬೇಕು. ನಮ್ಮ ದುರಾಸೆ ಬಿಟ್ಟು, ಪ್ರಾಮಾಣಿಕವಾಗಿ ಈ ವಿಚಾರದಲ್ಲಿ ಕೈ ಜೋಡಿಸಬೇಕು ಎಂದು ಹೇಳಿದರು.
ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗ ಮುಖ್ಯಸ್ಥ ಶಿವರಾಜು ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಮುಖ್ಯಶಿಕ್ಷಕಿ ಭ್ರಮರಾಂಬ, ವಿಶೇಷ ಶಿಕ್ಷಕರಾದ ಪದ್ಮಾ, ವಿದ್ಯಾವತಿ, ಮಾನಸ, ರಾಘವೇಂದ್ರ, ಪವಿತ್ರಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net