ಬುದ್ಧಿಮತ್ತೆಗೆ ಸಾಣೆ ಹಿಡಿಯುವ ಪದಬಂಧ

Published on

ಕೊಳ್ಳೇಗಾಲ: ಪತ್ರಿಕೆಯ ಓದುಗರ ನೆಚ್ಚಿನ ಅಂಕಣ, ಭಾಷಾಪ್ರೌಢಿಮೆ, ಮನೋವಿಕಾಸಗೊಳಿಸುವ ಜಾಣ, ಜಾಣೆಯರ ಪದಬಂಧ ಸ್ಪರ್ಧೆಯ ರೂಪದಲ್ಲಿ ವಿದ್ಯಾರ್ಥಿಗಳನ್ನು ತಲುಪಿತು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೊಳ್ಳೇಗಾಲದ ಲಯನ್ಸ್ ಕಾಲೇಜಿನಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಚಾನಲ್, ಲಯನ್ಸ್ ವಿದ್ಯಾ ಸಂಸ್ಥೆ ಸಹಯೋಗದಲ್ಲಿ ಶನಿವಾರ ಪದಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಾಲೇಜುಗಳ 98 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ 5 ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು.

ಮಕ್ಕಳು ಜ್ಞಾನದ ವಾರಸುದಾರರಾಗಬೇಕು: ಲಯನ್ಸ್ ಕಾಲೇಜು ಸಭಾಂಗಣದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಸಾಹಿತಿ ಮಹದೇವ ಶಂಕನಪುರ ಮಾತನಾಡಿ, ಪ್ರತಿಯೊಬ್ಬರು ಜ್ಞಾನದ ವಾರಸುದಾರರಾಗಬೇಕು. ಅದೊಂದೆ ನಿಮ್ಮ ಜೀವನವನ್ನು ಸಲಹುವುದು ಎಂದು ಸಲಹೆ ನೀಡಿದರು. ಡಾ.ಅಂಬೇಡ್ಕರ್ ಜನ್ಮದಿನವನ್ನು ವಿಶ್ವ ಮಟ್ಟದಲ್ಲಿ ಜ್ಞಾನದ ಸಂಕೇತ ದಿನ (ಸಿಂಬಲ್ ಆಫ್ ನಾಲೆಡ್ಜ್ ) ಎಂಬುದಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳು ಸಂವಿಧಾನ, ಪುಸ್ತಕಗಳು, ಸಾಹಿತ್ಯಗಳನ್ನು ಓದಿದರೆ ಜ್ಞಾನ ಹೆಚ್ಚುತ್ತದೆ. ಹಣ, ಅಧಿಕಾರ, ಸೌಂದರ್ಯ ಪ್ರಜ್ಞೆ ಮುಖ್ಯವಲ್ಲ. ಜ್ಞಾನದಿಂದ ಸಾಧನೆ ಸಾಧ್ಯ ಎಂಬ ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳಲ್ಲಿ ಕನ್ನಡ ಪದ ಸಂಪತ್ತು ಹೆಚ್ಚಲೆಂದು ವಿಜಯವಾಣಿ ಈ ಸ್ಪರ್ಧೆ ನಡೆಸುತ್ತಿದೆ. ಸ್ವಾತಂತ್ರ್ಯ ದಿನಕ್ಕೆ ಮಕ್ಕಳಿಗೆ ಸ್ಫೂರ್ತಿ, ಮಾದರಿಯಾಗುವ ವಿಶೇಷ ಸ್ಪರ್ಧೆಗಳು, ಅವರನ್ನು ತಿದ್ದುವ, ಎಚ್ಚರಿಸುವ ಕೆಲಸ ಮಾಡಿದೆ. ಕನ್ನಡದ ಮಹತ್ವವನ್ನು ತಿಳಿಸಿಕೊಡುವ ನಿರಂತರ ಪ್ರಯತ್ನ ಮಾಡುತ್ತಿರುವ ವಿಜಯವಾಣಿಗೆ ಧನ್ಯವಾದ ಎಂದರು.

ಪದಬಂಧ ಒಳ್ಳೆಯ ಹವ್ಯಾಸ: ಚಿತ್ರನಟ ಹಾಗೂ ವಾಲ್‌ನೆಟ್ ಬೇಕರಿ ಮಾಲೀಕ ಮಹೇಶ್ ಮಾತನಾಡಿ, ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಹೆಚ್ಚು ಪದಗಳನ್ನು ಹೊಂದಿರುವ ಭಾಷೆ ಕನ್ನಡವಾಗಿದೆ. ಆದರೀಗ, ನಾವು ಬೆರಳಣಿಕೆ ಪದಗಳನ್ನು ನಿತ್ಯ ಬಳಸುತ್ತಿರುವುದು ವಿಪರ್ಯಾಸವೇ ಸರಿ. ಕನ್ನಡ ಭಾಷೆ ವಿಶಾಲವಾದದ್ದು. ಆದ್ದರಿಂದ, ಹೆಚ್ಚು ಕನ್ನಡದ ಪದಗಳನ್ನು ತಿಳಿಯಬೇಕಾದರೆ ಪದಬಂಧ ತುಂಬಿ. ದಿನ ಪತ್ರಿಕೆಗಳಲ್ಲಿ ಪ್ರತಿ ನಿತ್ಯ ಪ್ರಕಟಿಸುವ ಪಂದಬಂಧ ಅಂಕಣಕ್ಕೆ ಸಮಯ ಮೀಸಲಿಡಿ. ಇದ್ದರಿಂದ ನಮ್ಮ ಮಾತೃ ಭಾಷೆಯ ಜ್ಞಾನ ಹೆಚ್ಚುತ್ತದೆ ಎಂದು ಸಲಹೆ ನೀಡಿದರು.

ಲಯನ್ಸ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಲಯನ್ ಜಿ.ಎಸ್.ಮಹದೇವ ಪ್ರಸಾದ್ ಮಾತನಾಡಿ, ಶಿಸ್ತು, ವಿನಯ, ಸಂಸ್ಕೃತಿಯನ್ನು ಕನ್ನಡ ಕಲಿಸುತ್ತದೆ. ಮಕ್ಕಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಗೂ ಆಧ್ಯತೆ ನೀಡಬೇಕು. ಇದು ಜೀವನದಲ್ಲಿ ಎತ್ತರಕ್ಕೆ ಬೆಳೆಸುತ್ತದೆ ಎಂದರು. ಲಯನ್ಸ್ ಕಾಲೇಜಿನ ಪ್ರಾಂಶುಪಾಲೆ ವಿನೂತ, ಉಪನ್ಯಾಸಕ ಶ್ಯಾಮ್‌ಕುಮಾರ್, ಹರೀಶ್, ವೀರಳಗಶೆಟ್ಟಿ, ಪವನ್‌ಕುಮಾರ್, ಲಿಂಗರಾಜು, ಪ್ರಸನ್ನಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ನಂಜುಂಡ ಮೂರ್ತಿ, ನಿಸರ್ಗ ಕಾಲೇಜಿನ ಉಪನ್ಯಾಸಕ ದೊರೆಸ್ವಾಮಿ ಇದ್ದರು.

ವಿದ್ಯಾರ್ಥಿ ಮಿತ್ರ ಓದಿ: ಲಯನ್ಸ್ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಲಯನ್ ಎಸ್.ನಾಗರಾಜು ಮಾತನಾಡಿ, ಛಲವಿದ್ದವನು ಏನಾದರೂ ಸಾಧಿಸಬಲ್ಲ ಎಂಬದಾಗಿ ಬಸವಾದಿ ಶರಣರು ಬೋಧಿಸಿದ್ದಾರೆ. ವಿದ್ಯಾರ್ಥಿ ಸಮೂಹ ಛಲದ ಜತೆ ಓದಿನಲ್ಲಿ ಶ್ರದ್ಧೆ, ವಿನಯ ರೂಢಿಸಿಕೊಂಡರೆ ಯಶಸ್ಸು ಸಿಗುತ್ತದೆ. ವಿಜಯವಾಣಿ ಪತ್ರಿಕೆ ವಿದ್ಯಾರ್ಥಿ ಮಿತ್ರ ಚೆನ್ನಾಗಿ ಮೂಡಿಬರುತ್ತಿದ್ದು. ಮಕ್ಕಳು ಇದನ್ನು ಓದಿ ಪರೀಕ್ಷೆಗೆ ಅನುಕೂಲ ಆಗಲಿದೆ ಎಂದರು.

ವಿಜೇತರು: ಲಯನ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಂ.ರಕ್ಷಿತ, ಶ್ರೀವಾಸವಿ ಸಂಯುಕ್ತ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಕೆ.ಮಾದಲಾಂಬಿಕೆ, ನಿಸರ್ಗ ಸ್ವತಂತ್ರ ಪ.ಪೂ. ಕಾಲೇಜಿನ ಎಂ.ಸಿಂಧು, ಕೆ.ದಿವ್ಯ, ಕೆ.ಅರುಣ್ ಕುಮಾರ್ ವಿಜೇತರಾಗಿದ್ದು. ತಲಾ 1 ಸಾವಿರ ಬಹುಮಾನ ಪಡೆದುಕೊಂಡರು. ಸ್ಪರ್ಧೆಯಲ್ಲಿ ವಿಶ್ವಚೇತನ ಪಿಯು ಕಾಲೇಜು, ಜೆಎಸ್‌ಎಸ್ ಬಾಲಕಿಯರ ಪಿಯು, ಶ್ರೀಮಹದೇಶ್ವರ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪದಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net