ಯಳಂದೂರು: ಬಿಹಾರದಲ್ಲಿರುವ ಬುದ್ಧಗಯಾದ ಮಹಾಬೋಧಿ, ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಸಂಪೂರ್ಣವಾಗಿ ಬೌದ್ಧರಿಗೆ ವಹಿಸಬೇಕೆಂದು ಚೆನ್ನಲಿಂಗನಹಳ್ಳಿ ಚೇತವನ ಬುದ್ಧವಿಹಾರದ ಮನೋರಖ್ಖಿತ ಬಂತೇಜಿ ಆಗ್ರಹಿಸಿದರು.
ಪಟ್ಟಣದಲ್ಲಿ ಹೊನ್ನೂರು ಗ್ರಾಮದ ಮಹಾವನ ಬುದ್ಧವಿಹಾರದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಬೌದ್ಧರಿಗೆ ಪವಿತ್ರ ಸ್ಥಳವಾದ ಬಿಹಾರದ ಬುದ್ಧಗಯಾದ ಮಹಾಬೋಧಿ, ಮಹಾವಿಹಾರದ ಬೋದ್‌ಗಯ ಟೆಂಪಲ್ ಆ್ಯಕ್ಟ್-1949ನ್ನು ರದ್ದುಗೊಳಿಸಬೇಕು. ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ವಹಿಸಬೇಕೆಂದು ಆಗ್ರಹಿಸಿ ನೂರಾರು ಬೌದ್ಧ ಬಿಕ್ಕುಗಳು ಕಳೆದ ಫೆ. 12 ರಿಂದಲೂ ಅನಿರ್ದಿಷ್ಟಾವಧಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಶಾಂತಿಯುತವಾಗಿ ನಡೆಸಲಾಗುತ್ತಿದೆ.
ಆದರೆ ಈ ಹೋರಾಟವನ್ನು ವಿಫಲಗೊಳಿಸಲು ಕೆಲವು ಪುರೋಹಿತಶಾಹಿಗಳು ನಿರಂತರ ಯತ್ನಗಳನ್ನು ನಡೆಸುತ್ತಲೇ ಇವೆ. ಅಲ್ಲದೆ ಧರಣಿ ನಡೆಸುತ್ತಿರುವ ಜಾಗದ ಮುಂಭಾಗ ಬೌದ್ಧ ಬಿಕ್ಕುಗಳನ್ನು ಸೃಷ್ಟಿಸಿ ಅವರಿಗೆ ಭೋಜನವನ್ನು ನೀಡಿ ನಮ್ಮ ಹೋರಾಟಕ್ಕೆ ನಮಗೆ ಅವಮಾನ ಮಾಡಿದ್ದಾರೆ. ಅಲ್ಲದ ಮಹಾಬೋಧಿಯ ಪಾವಿತ್ರ್ಯವನ್ನು ಹಾಳು ಮಾಡಿದ್ದಾರೆ. ಆದರೂ ಕೂಡ ಬುದ್ಧ ಪರಂಪರೆಯಿಂದ ಬಂದಿರುವ ಬಿಕ್ಕುಗಳು ಶಾಂತಿಯುತವಾಗಿ ತಮ್ಮ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ ಎಂದರು.
ಆದರೆ ಬಿಹಾರದ ಸರ್ಕಾರದ ಕುತಂತ್ರ ಬುದ್ಧಿಯಿಂದ ಫೆ. 27ರಂದು ಮಧ್ಯರಾತ್ರಿ ಸಮಯದಲ್ಲಿ ಸತ್ಯಾಗ್ರಹ ನಿರತ ಬಂತೇಜಿಗಳು ಮಲಗಿರುವ ಸ್ಥಳದಲ್ಲಿ ಅನಾರೋಗ್ಯದ ಸುಳ್ಳು ನೆಪವೊಡ್ಡಿ ಅವರನ್ನು ಬಲವಂತವಾಗಿ ಆಂಬುಲೆನ್ಸ್‌ನಲ್ಲಿ ಎತ್ತಿಹಾಕಲಾಗಿದೆ. ಸತ್ಯಾಗ್ರಹಕ್ಕೆ ಅನುಮತಿ ಪಡೆದಿಲ್ಲ ಎಂಬ ನೆಪವೊಡ್ಡಿ ಪೊಲೀಸ್ ವ್ಯಾನ್‌ಗೆ ಬಲವಂತವಾಗಿ ಎತ್ತಿ ಹಿಂಸೆ ನೀಡಿ ದೌರ್ಜನ್ಯ ಎಸೆಗಲಾಗಿದೆ. ಇದರೊಂದಿಗೆ ಮಹಿಳಾ ಬಿಕ್ಕುಣಿಯರೊಂದಿಗೆ ಅನುಚಿತವಾಗಿ ವರ್ತಿಸಲಾಗಿದೆ ಎಂದು ಆರೋಪಿಸಿದರು.
ಹೊನ್ನೂರು ಮಹಾವನ ಬುದ್ಧವಿಹಾರದ ಬುದ್ಧರತ್ನ ಬಂತೇಜಿ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಚೇರಿಗೆ ತಲುಪಿ ಗ್ರೇಡ್-2 ತಹಸೀಲ್ದಾರ್ ಶಿವರಾಜು ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮುಖಂಡರಾದ ಚೇತವನದ ಸುಗತಪಾಲ ಬಂತೇಜಿ, ಸಿ. ರಾಜಣ್ಣ, ಕಂದಹಳ್ಳಿ ನಾರಾಯಣ, ಸಂಗಸೇನ, ಮಹೇಶ, ಸಿ.ಎಂ. ಕೃಷ್ಣಮೂರ್ತಿ, ಶಾಂತರಾಜು, ಸುಂದರ್ ಕಲಿವೀರ್, ನಾಗರಾಜು, ದೊರೆಸ್ವಾಮಿ, ಕುಮಾರ್, ರವಿಚಂದ್ರ, ಚಾಮರಾಜು, ಮಹೇಶ್, ಕಿರಣ್, ಚಂದ್ರು, ನಂಜುಂಡ, ಸುರೇಶ್, ಜಲೇಂದ್ರ, ನಂಜುಂಡಯ್ಯ, ಶಂಕರಮೂರ್ತಿ ಸೇರಿದಂತೆ ಅನೇಕರು ಇದ್ದರು.