ಬುದ್ಧವಿಹಾರ ನಿರ್ಮಾಣಕ್ಕೆ ಅವಕಾಶ ನೀಡಲು ಮನವಿ

12rajesh6
Published on

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಕೂತನೂತು ಗ್ರಾಮದ ಸರ್ವೇ ನಂ.23 ರಲ್ಲಿ ಇರುವ ಬೋಧಿಸತ್ವ ಬೆಟ್ಟದಲ್ಲಿ ಬುದ್ಧವಿಹಾರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತಕ್ಷಶಿಲ ಬುದ್ಧ ವಿಹಾರ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಿ ಟ್ರಸ್ಟ್ ಅಧ್ಯಕ್ಷ ಸುಭಾಷ್ ಮಾಡ್ರಳ್ಳಿ ಮಾತನಾಡಿ, ಮಲ್ಲಯ್ಯನಪುರ ಗ್ರಾಮದ ಸಮೀಪದಲ್ಲಿರುವ ಕೂತನೂರು ಗ್ರಾಮದ ಸರ್ವೇ ನಂ.23 ರಲ್ಲಿ ಬರುವ ಬೋಧಿಸತ್ವ ಬೆಟ್ಟದಲ್ಲಿ ಸಾರ್ವಜನಿಕರು ಬುದ್ಧಮೂರ್ತಿ ಪ್ರತಿಷ್ಠಾಪನೆ ಮಾಡಿ, ಧಾರ್ಮಿಕ ವಿಧವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಬುದ್ಧ ಧರ್ಮದ ಉಪಾಸಕರು ಸೇರಿ ಈ ಸಂಬಂಧ ತಕ್ಷಶಿಲ ಬುದ್ಧ ವಿಹಾರ ಚಾರಿಟಬಲ್ ಟ್ರಸ್ಟ್ ಮೂಲಕ ಧಮ್ಮದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಸುತ್ತಲಿನ ಪರಿಸರವನ್ನು ಉಳಿಸುವ ಕೆಲಸವನ್ನು ಟ್ರಸ್ಟ್ ಮಾಡಿಕೊಂಡು ಬರುತ್ತಿದೆ ಎಂದರು.

ಪ್ರತಿ ತಿಂಗಳು ಹುಣ್ಣಿಮೆ ಕಾರ್ಯಕ್ರಮಗಳ ಜತೆಗೆ ಬುದ್ಧ ವಂದನೆ, ಧ್ಯಾನ ಮತ್ತು ಅನ್ನದಾನವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಹಾಗಾಗಿ ಸಾವಿರಾರು ಜನರ ಶ್ರದ್ಧಾಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ. ಈ ನಿಟ್ಟಿನಲ್ಲಿ ಬುದ್ಧ ವಿಹಾರ ನಿರ್ಮಾಣಕ್ಕೆ ತಕ್ಷಶಿಲ ಬುದ್ಧವಿಹಾರ ಚಾರಿಟಬಲ್ ಟ್ರಸ್ಟ್ ಆಡಳಿತ ಮಂಡಳಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಕ್ಷಶಿಲ ಬುದ್ದ ವಿಹಾರ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಡಾ.ನವೀನ್ ಮೌರ್ಯ, ನಿರ್ದೇಶಕರಾದ ಎಂ.ಶ್ರೀನಿವಾಸ್, ಶೀರಯ್ಯ, ಮದ್ದಯ್ಯನಹುಂಡಿ ನಾಗರಾಜ್, ಮಲ್ಲೇಶ್ ವೀರನಪುರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net