

ಭಾಲ್ಕಿ: ನಾವೆಲ್ಲರೂ ತಥಾಗತ ಗೌತಮ ಬುದ್ಧರ ಸಂದೇಶದಂತೆ ಬದುಕು ಸಾಗಿಸಿದರೆ ನಮ್ಮ ಬದುಕು ಸುಂದರವಾಗುವುದು ಎಂದು ಸಂಸದ ಸಾಗರ್ ಖಂಡ್ರೆ ಹೇಳಿದರು.
ಪಟ್ಟಣದ ಸಿದ್ಧಾರ್ಥನಗರ ಬಡಾವಣೆಯ ಬೌದ್ಧವಿಹಾರ ಆವರಣದಲ್ಲಿ ಭಾರತೀಯ ಬೌದ್ಧ ಮಹಾಸಭೆ ಸಿದ್ಧಾರ್ಥ ನಗರ ಶಾಖೆಯಿಂದ ಆಯೋಜಿಸಿದ್ದ ೬ನೇ ವರ್ಷಾವಾಸ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ವಸ್ವವನ್ನು ತ್ಯಾಗಮಾಡಿ, ಸಮ ಸಮಾಜ ನಿರ್ಮಾಣಕ್ಕಾಗಿ ಬದ್ಧರಾಗಿದ್ದ ಗೌತಮ ಬುದ್ಧರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಒತ್ತಡದ ಜೀವನದಲ್ಲಿ ಶಾಂತಿಯಿಂದ ಬಾಳಲು ಗೌತಮ ಬುದ್ಧರಂತಹ ಮಹಾನ್ ಪುರುಷರ ತತ್ವಾದರ್ಶಗಳಿಗೆ ಶರಣಾಗಬೇಕು. ಎಲ್ಲ ವರ್ಗದ ಜನರಿರುವ ಪಟ್ಟಣದ ಸಿದ್ಧಾರ್ಥ ನಗರ ಬಡಾವಣೆಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಭಿಕ್ಕು ಸಂಘದ ಕಶ್ಯಪ್ ಭಂತೇಜಿ ದಿವ್ಯ ಸಾನ್ನಿಧ್ಯವಹಿಸಿದ್ದರು. ಬಿಎಸ್‌ಐ ಅಧ್ಯಕ್ಷ ಬಾಬುರಾವ ಸಿಂಧೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಎಸ್‌ಐ ಖಜಾಂಚಿ ಡಿ.ಡಿ.ಸಿಂಧೆ ಪ್ರಾಸ್ತಾವಿಕ ಮಾತನಾಡಿದರು. ಯುವ ನಾಯಕ ಪ್ರಶಾಂತ ಕೊಟಗೀರಾ ವರ್ಷಾವಾಸ ಸಮಾರಂಭದ ಮಾಹಿತಿ ನೀಡಿದರು. ಗ್ಯಾರೆಂಟಿ ಯೋಜನೆಯ ಉಪಾಧ್ಯಕ್ಷ ಅಬ್ದುಲ್ ನಶೀರ್ ಮಾತನಾಡಿದರು.
ಸಿದ್ಧಾರ್ಥ ನಗರ ಚರ್ಚ್ನ ಸತೀಶ ಪಾಷ್ಟರ್, ಪುರಸಭೆ ಅಧ್ಯಕ್ಷೆ ಶಶಿಕಲಾ ಸಿಂಧನಕೆರೆ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಮಾಜಿ ಅಧ್ಯಕ್ಷ ಬಸವರಾಜ ವಂಕೆ, ವಿಜಯಕುಮಾರ ಗಾಯಕವಾಡ, ಹಣಮಂತರಾವ ಚವ್ಹಾಣ್, ತಾತೇರಾವ ಕಾಂಬಳೆ, ಕೆ.ಬಿ.ಗೋಖಲೆ, ಲಲಿತಬಾಯಿ ರಾಠೋಡ್, ಬಾಬುರಾವ ರಾಠೋಡ್, ಪಾಂಡುರಂಗ ಗಾಯಕವಾಡ, ಬುದ್ಧಾನಂದ ಸಿಂಧೆ, ದಿಗಂಬರಾವ ಫುಲೆ, ಲಾಲಪ್ಪ ತೇಗಂಪುರೆ, ಪ್ರಭಾಕರ ರತ್ನಾಕರ ಇತರರಿದ್ದರು. ಪ್ರಶಾಂತ ಸ್ವಾಗತಿಸಿ ನಿರೂಪಣೆ ಮಾಡಿದರು. ಅಶೋಕ ಪುಜಾರಿ ವಂದಿಸಿದರು.