ಬುದ್ಧನ ಆದರ್ಶಗಳನ್ನು ಯುವ ಪೀಳಿಗೆ ಅನುಸರಿಸಲಿ

12 HANUR 2 A
Published on

ಹನೂರು: ಶಾಂತಿಯ ಪ್ರತೀಕ ಭಗವಾನ್ ಬುದ್ಧ ದೇಶದ ಶಕ್ತಿ. ಹಾಗಾಗಿ ಎಲ್ಲ ದೇಶಗಳಲ್ಲೂ ಅನುಯಾಯಿಗಳಿದ್ದು, ಅವರನ್ನು ಪೂಜಿಸುತ್ತಿದ್ದಾರೆ ಎಂದು ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ಬುದ್ಧ ಪೂರ್ಣಿಮಾ ಆಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ನೇಪಾಳದ ಲುಂಬಿನಿವನದಲ್ಲಿ ಜನಿಸಿದ ಗೌತಮ ಬುದ್ಧ ಬೌದ್ಧ ಧರ್ಮದ ಸ್ಥಾಪಕ. ಇವರು ರಾಜವಂಶದ ಸಕಲ ವೈಭೋಗ ತ್ಯಜಿಸಿ ಜ್ಞಾನೋದಯ ಪಡೆದು ಲೋಕಕ್ಕೆ ಶಾಂತಿ ಹಾಗೂ ಅಹಿಂಸೆ ಮಹತ್ವ ಸಾರಿದರು. ಇವರ ಜನನ, ಜ್ಞಾನೋದಯ ಹಾಗೂ ಪರಿನಿರ್ವಾಣವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಬುದ್ಧ ಪೂರ್ಣಿಮೆ ಆಚರಿಸಲಾಗುತ್ತದೆ. ಇದನ್ನು ಬುದ್ಧ ಜಯಂತಿ ಎಂತಲೂ ಕರೆಯಲಾಗುತ್ತಿದ್ದು, ಬೌದ್ಧ ಧರ್ಮದ ಅತ್ಯಂತ ಪವಿತ್ರವಾದ ದಿನಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಬುದ್ಧ ಜಗತ್ತಿಗೆ ಬೆಳಕು ನೀಡಿದ ದಾರ್ಶನಿಕರಾಗಿದ್ದು, ಇವರ ಆದರ್ಶಗಳು ಉತ್ತಮ ಸಮಾಜಕ್ಕೆ ಸ್ಫೂರ್ತಿದಾಯಕ. ಯುವ ಪೀಳಿಗೆಗೆ ಇದು ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ದಿಸೆಯಲ್ಲಿ ಸರ್ಕಾರದ ಸೂಚನೆಯಂತೆ ಬುದ್ಧ ಪೂರ್ಣಿಮೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಶಿರಸ್ತೇದಾರ್ ನಾಗೇಂದ್ರ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್, ಆರ್‌ಐ ಶೇಷಣ್ಣ, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್ ಹಾಗೂ ಇತರರು ಇದ್ದರು.

ಪಟ್ಟಣ ಪಂಚಾಯಿತಿಯಲ್ಲೂ ಆಚರಣೆ: ಪಟ್ಟಣ ಪಂಚಾಯಿತಿ ಕಚೇರಿಯಲ್ಲೂ ಸೋಮವಾರ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಯಿತು. ಬುದ್ಧರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಮುಖ್ಯಾಧಿಕಾರಿ ಎಂ.ಪಿ ಮಹೇಶ್‌ಕುಮಾರ್, ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧ ಮಹಾನ್ ದಾರ್ಶನಿಕ. ಅಹಿಂಸೆ ಹಾಗೂ ಶಾಂತಿ ಮೂಲಕ ಜ್ಞಾನೋದಯ ಪಡೆದು ಜಗತ್ತಿಗೆ ಸಾರಿದರು. ವೈಶಾಖ ಹುಣ್ಣೆಮೆಯಂದು ಜಯಂತಿ ಆಚರಿಸಲಾಗುತ್ತಿದೆ. ಇವರ ಆದರ್ಶ ಎಲ್ಲರಿಗೂ ಅನುಕರಣೀಯ ಎಂದರು. ಪಪಂ ಅಧ್ಯಕ್ಷೆ ಮಮ್ತಾಜ್‌ಬಾನು, ಸದಸ್ಯರಾದ ಸುದೇಶ್, ಮಹಾದೇಶ್, ಬಸವರಾಜು, ಕಚೇರಿ ಅಧಿಕಾರಿಗಳು ಹಾಗೂ ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net