ಬುದ್ಧನ ಆದರ್ಶ ಪಾಲನೆಯಿಂದ ಚೈತನ್ಯ

15Rajesh1
Published on

ಚಾಮರಾಜನಗರ: ಬುದ್ಧನ ಸಂದೇಶ ಮತ್ತು ಆದರ್ಶಗಳನ್ನು ಪಾಲನೆ ಮಾಡುವುದರಿಂದ ಒಂದು ರೀತಿಯ ಚೈತನ್ಯ ಮತ್ತು ಶಕ್ತಿ ಬರುತ್ತದೆ ಎಂದು ತಿ.ನರಸೀಪುರದ ನಳಂದ ಬುದ್ಧ ವಿಹಾರದ ಬಂತೇ ಭೋದಿರತ್ನ ತಿಳಿಸಿದರು.

ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಹಾಗೂ ಗ್ರಂಥಾಲಯ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ಸೇರಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಬೌದ್ಧ ಧರ್ಮವನ್ನು ಸ್ವೀಕರಿಸಿ, ಅದರಂತೆ ನಡೆದುಕೊಂಡರೆ ಬುದ್ಧನ ಅಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಪಾಲಿಸಿದರೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು. ಜಗತ್ತಿಗೆ ಶಾಂತಿ ಮಂತ್ರವನ್ನು ಪಾಲಿಸಿದ ಬುದ್ಧ, ಬೌದ್ಧ ಧರ್ಮ ದೀಕ್ಷೆಯನ್ನು ಎಲ್ಲರಿಗೂ ನೀಡಿದರು. ಅವರ ನಂತರ ಡಾ.ಬಿ.ಆರ್. ಅಂಬೇಡ್ಕರ್ ಅವರು ಅಸಮಾನತೆ, ಜಾತೀಯತೆ ಹೋಗಲಾಡಿಸುವ ಶಕ್ತಿ ಇರುವುದು ಬೌದ್ಧ ಧರ್ಮದಲ್ಲಿ ಮಾತ್ರ ಎಂದು ಮನಗಂಡು ನಾನು ಹಿಂದುವಾಗಿ ಹುಟ್ಟಿದೆ. ಆದರೆ ಹಿಂದುವಾಗಿ ಸಾಯಲಾರೆ ಎಂದು ಬೌದ್ಧ ಧರ್ಮವನ್ನು ಸ್ವೀಕರಿಸಿ, ನಮ್ಮೆಲ್ಲರಿಗೂ ಮಾದರಿಯಾದರು ಎಂದರು.

ಅವರ ಹಾದಿಯಲ್ಲಿ ಸಾಗುತ್ತಿರುವ ನಾವೆಲ್ಲರು ಅವರಂತೆ ಬೌದ್ಧ ಧರ್ಮದ ಪರಿಪಾಲಕರಬೇಕು. ಆಯಾ ಧರ್ಮಗಳ ಅನುಸರಿಸುವ ಮೂಲಕ ನೆಮ್ಮದಿ ಜೀವನ ಮಾಡುತ್ತಿರುವ ಇತರೇ ಧರ್ಮಿಯರಂತೆ ನಾವು ಸಹ ಬುದ್ದ ಶಾಂತಿ ಮಂತ್ರವನ್ನು ಅನುಸರಿಸಿ, ನೆಮ್ಮದಿ ಜೀವನ ನಡೆಸೋಣ. ಬೌದ್ಧವನ್ನು ಪಾಲನೆ ಮಾಡುತ್ತಿರುವ ಜಪಾನ್, ಥೈವಾನ್, ಚೀನಾ, ಸೇರಿದಂತೆ ಅನೇಕ ರಾಷ್ಟ್ರಗಳು ಇಂದು ಅಭಿವೃದ್ಧಿ ಹೊಂದಿವೆ. ಹೀಗಾಗಿ ಬುದ್ಧನ ಸಂದೇಶ ಮತ್ತು ಅವರ ಅದರ್ಶ ಪಾಲಿಸಿರುವುದರಿಂದ ಒಂದು ರೀತಿಯ ಚೈತನ್ಯ ಮತ್ತು ಶಕ್ತಿ ಬರುತ್ತದೆ ಎಂದು ಬಂತೇಜಿ ತಿಳಿಸಿದರು.

ಬಿಸಲವಾಡಿಯಲ್ಲಿ ಡಾ.ಅಂಬೇಡ್ಕರ್ ಪುತ್ಥಳಿ ಹಾಗೂ ಗ್ರಂಥಾಲಯ ನಿರ್ಮಿಸುತ್ತಿರುವುದು ಪ್ರಗತಿಯ ಸಂಕೇತವಾಗಿದೆ. ಡಾ.ಅಂಬೇಡ್ಕರ್ ಇದ್ದ ಕಡೆ ಜ್ಞಾನವಿರಬೇಕು. ಹೀಗಾಗಿ ಯುವ ಪೀಳಿಗೆಯ ಜ್ಞಾನ ಸಂಪತ್ತು ಹೆಚ್ಚಿಸಲು ಸಾಧ್ಯವಾಗಿದೆ ಎಂದರು. ಬಹುಬೇಗ ಕಟ್ಟಡ ನಿರ್ಮಾಣಗೊಂಡು ಗ್ರಾಮದ ಮುಖ್ಯ ದ್ವಾರದಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ಅನಾವರಣಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.

ಇದಕ್ಕು ಮುನ್ನ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಸಿ. ಪುಟ್ಟರಂಗಶೆಟ್ಟಿ ಉದ್ದೇಶಿತ ಅಂಬೇಡ್ಕರ್ ಪುತ್ಥಳಿ ಹಾಗೂ ಗ್ರಂಥಾಲಯ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ, ಶುಭ ಕೋರಿದರು. ಬಿಸಲವಾಡಿ ಗ್ರಾಪಂ ಅಧ್ಯಕ್ಷ ಸಿ.ಬಾಲರಾಜು, ಮಾಜಿ ಅಧ್ಯಕ್ಷೆ ರಮ್ಯಾ ನಾಗರಾಜು, ಪಿಎಸಿಸಿ ಬ್ಯಾಂಕ್ ನಿರ್ದೇಶಕ ಶಿವಕುಮಾರ್, ಯಜಮಾನರಾದ ಸಿ.ಮಹದೇವಯ್ಯ, ಶಿವಸ್ವಾಮಿ, ಪಿ. ರಮೇಶ್, ಶಿವಕುಮಾರ್, ಸೋಮಶೇಖರ್ ಬಿಸಲ್ವಾಡಿ, ಜನಧ್ವನಿ ಪಿ. ಸುರೇಶ್, ವಕೀಲರಾದ ಮಲ್ಲಿಕ್, ಪುಟ್ಟಸ್ವಾಮಿ, ನಿವೃತ್ತ ಅಧಿಕಾರಿ ಮಂಜು ಕೋಡಿಉಗನೆ, ಉಮೇಶ್ ಕುದರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net