

ಮೈಸೂರು: ಪ್ರಸ್ತುತ ಯುದ್ಧದಿಂದ ಅಪಾರ ಸಾವು-ನೋವು ಸಂಭವಿಸುತ್ತಿದ್ದು, ಸಕಲ ಜೀವರಾಶಿಗಳ ಉಳಿವಿಗೆ ಗೌತಮ ಬುದ್ಧನ ಪ್ರೀತಿಯ ಮತ್ತು ಅಹಿಂಸಾತ್ಮಕ ಮಾರ್ಗ ಪ್ರಸ್ತುತ ಅವಶ್ಯ ಎಂದು ಅಂಬೇಡ್ಕರ್ ವಿಚಾರವಾದಿ ಜಿತೇಂದ್ರ ಕೆ.ತಳವಾರ ಹೇಳಿದರು.
ಕರ್ನಾಟಕ ಬುದ್ಧ ಧಮ್ಮ ಸಮಿತಿ ವತಿಯಿಂದ ವಿಜಯನಗರ 1ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಬುದ್ಧ ವಿಹಾರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಬುದ್ಧ ಜಯಂತಿಯಲ್ಲಿ ಮಾತನಾಡಿದರು.
ಭಾರತದ ನೆಲ ಎಂದೂ ಹಿಂಸೆಯ ಬೀಡಲ್ಲ. ಇದು ಶಾಂತಿ, ಸಹನೆ, ತಾಳ್ಮೆ, ಸಹೋದರತ್ವವನ್ನು ಬೆಳೆಸುತ್ತಿರುವ ನಾಡು ಇದಾಗಿದೆ. ಇಂದು ವಿಶ್ವದ ಅನೇಕ ರಾಷ್ಟ್ರಗಳು ಬುದ್ಧರ ಶಾಂತಿಯ ಸಂದೇಶವನ್ನು ಅನುಸರಿಸುತ್ತಿರುವುದರಿಂದ ಅಲ್ಲಿನ ನೆಮ್ಮದಿಯಿಂದ ಬದುಕುವಂತಾಗಿದೆ. ಇದು ಎಲ್ಲ ದೇಶಗಳಲ್ಲೂ ಅನುಸರಣೆಯಾದಾಗ ಮಾತ್ರ ಯುದ್ಧ ಕೊನೆಗಾಣಲು ಸಾಧ್ಯ ಎಂದರು.
ಬಾಬಾಸಾಹೇಬರೂ ಕೂಡ ಬುದ್ಧರ ಮಾರ್ಗವನ್ನು ಅನುಸರಿಸಿ ಶಾಂತಿಯುತ ಹೋರಾಟದ ಮೂಲಕವೇ ಜನರಿಗೆ ಹಕ್ಕು ತಂದು ಕೊಡಲು ಶ್ರಮಿಸಿದರು. ಡಾ.ಅಂಬೇಡ್ಕರ್ ಅವರು ಬಾಲ್ಯದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಶಿಷ್ಯ ವೇತನದ ಮೂಲಕ ಅಧ್ಯಯನ ಮಾಡಿದರು.
ಬಡವರು, ಹಿಂದುಳಿದವರ ಮತ್ತು ವಿಶೇಷವಾಗಿ ಮಹಿಳೆಯರ ಹಕ್ಕು ಸ್ಥಾಪಿಸಿದರು. ಅವರ ಅಧ್ಯಯನ ಶೀಲತೆ ನಮಗೆ ಇಂದು ಮಾದರಿಯಾಗಬೇಕಾಗಿದೆ ಎಂದರು.
ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರ್.ಮಹದೇವಪ್ಪ ಮಾತನಾಡಿ, ಗೌತಮ ಯುದ್ಧ ವಿರೋಧಿಸಿ ಮನೆಬಿಟ್ಟ. ಆದರೆ ಇಂದು ಜಗತ್ತಿನಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಿದೆ.
ಜನರಲ್ಲಿ ನೈತಿಕತೆ ಕಡಿಮೆಯಾಗಿದೆ. ಕೌಟುಂಬಿಕ ವ್ಯವಸ್ಥೆ ಶಿಥಿಲಗೊಂಡು ಮಕ್ಕಳೇ ತಂದೆ-ತಾಯಿಯನ್ನು ಕೊಲೆ ಮಾಡುತ್ತಿರುವುದು ದುರಂತದ ಸಂಗತಿ. ಅಜ್ಞಾನದಿಂದ ಕೂಡಿರುವ ಕತ್ತಲಿನ ಜಗತ್ತಿಗೆ ಬುದ್ಧನ ಬೆಳಕು ಅಗತ್ಯವಾಗಿದೆ ಎಂದರು
ಕಾರ್ಯಕ್ರಮಕ್ಕೂ ಮುನ್ನ ಬಂತೇಜಿಯವರಿಂದ ಬುದ್ಧ ವಂದನೆ ಮತ್ತು ಬುದ್ಧರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು.
ನಂತರ ಶ್ರೀಲಂಕಾದಿಂದ ತಂದು ಬೆಳೆಸಿರುವ ಬೋಧಿವೃಕ್ಷಕ್ಕೆ ಪೂಜೆ ಸಲ್ಲಿಸಿ, ತ್ರಿಸರಣ ಪಠಣ ಮಾಡಲಾಯಿತು.
ಕೊಳ್ಳೇಗಾಲ ಜೇತವನ ಬುದ್ಧ ವಿಹಾರದ ಮನೋರಕ್ಖಿತಾ ಬಂತೇಜಿ, ಚಂದ್ರಮುನಿ ಬಂತೇಜಿ, ಸಮಿತಿಯ ಅಧ್ಯಕ್ಷ ಪ್ರೊ.ಡಿ.ನಂಜುಂಡಯ್ಯ, ಸಹಕಾರ್ಯದರ್ಶಿ ಎಚ್.ಶಿವರಾಜು, ಆರ್. ನಟರಾಜು, ವಕೀಲ ರಾಜು ಹಂಪಾಪುರ, ಎಂ.ಸಾವಕಯ್ಯ, ಡಾ.ಕೃಷ್ಣಮೂರ್ತಿ, ಉಪಾಸಕರಾದ ಪುಟ್ಟಸ್ವಾಮಿ, ರಾಜಮ್ಮ, ಬಿ.ಎಂ.ಲಿಂಗರಾಜು, ರಾಜಶೇಖರ್, ಅಹಿಂದ ಜವರಪ್ಪ, ರಾಮನಗರ ಸಿದ್ದರಾಜು, ನಿಸರ್ಗ ಸಿದ್ದರಾಜು, ಡಾ.ಮಂಜು ಸತ್ತಿಗೆಹುಂಡಿ, ಕಲಾವಿದರಾದ ಆನಂದ್, ಮಹಾಲಿಂಗು, ರೂಪೇಶ್, ವಸಂತಕುಮಾರ್, ವಿಜಯ ಕುಮಾರ್, ಸಚಿನ್ ಇದ್ದರು.