

ಹುಮನಾಬಾದ್: ಸರ್ವ ಜನಾಂಗದ ಒಳಿತನ್ನು ಬಯಸಿದ ಭಗವಾನ ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಆಶ್ರಯ ದೀಪ ಟ್ರಸ್ಟ್ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಅವರ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಅನ್ಯಾಯ ಮೇಲುಗೈ ಸಾಧಿಸಿದಾಗ ಅವತಾರ ಪುರುಷರು ಕಾಣಿಸಿಕೊಂಡು ಧರ್ಮವನ್ನು ಸ್ಥಾಪಿಸುತ್ತಾರೆ ಎಂಬ ನಂಬಿಕೆ ಇದೆ. ೧೨ನೇ ಶತಮಾನದಲ್ಲಿ ಬಸವೇಶ್ವರ ಮತ್ತು ೧೯ನೇ ಶತಮಾನದಲ್ಲಿ ಡಾ. ಅಂಬೇಡ್ಕರ್ ಅವರು ದೀನದಲಿತರು, ಶೋಷಿತರ ವಿಮೋಚನಕಾರರಾಗಿ, ಅಜ್ಞಾನ ಮತ್ತು ಮೂಢನಂಬಿಕೆಗಳ ವಿರುದ್ಧ ಸಮಾಜ ಸುಧಾರಕರಾಗಿ ಕಾಣಿಸಿಕೊಂಡರು ಎಂದರು.
ಗೌತಮ ಬುದ್ಧರು ಆಸೆಯೇ ಮೂಲ ಎಂದು ಸಾರಿದರೇ, ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹಾಗೂ ಡಾ.ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ ಮತ್ತು ಒಗ್ಗಟ್ಟಿನ ಹೋರಾಟ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದ್ದಾರೆ. ಜೀವನದ ಸಾರವನ್ನು ತಿಳಿಸುವ ಈ ಸಂದೇಶಗಳು ಇಂದಿನ ಯುವಕರು ಅರಿತುಕೊಳ್ಳಬೇಕು. ಟ್ರಸ್ಟ್ ಮೂಲಕ ಸಮಾಜಪರ ಕೆಲಸಗಳು ನಡೆಯಲಿ. ಸದಾ ಸಹಾಯ ಸಹಕಾರ ನೀಡುವುದಾಗಿ ಹೇಳಿದರು.
ಸ್ಥಳೀಯ ಹಿರೇಮಠದ ಶ್ರೀ ರೇಣುಕವೀರ ಗಂಗಾಧರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರಾಮ ಮತ್ತು ರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ನಾಗಶಟ್ಟಿ ಶೇರಿಕಾರ, ಸುರಪುರನ ವೀರಪ್ಪ, ನಿಷ್ಠಿ ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕ ಪ್ರಶಾಂತ ಶೇರಿಕಾರ, ಡಾ.ಸಿದ್ರಾಮ ವಾಗ್ಮಾರೆ, ಸತೀಶಸಿಂಧೆ, ಹಣ್ಮುಪಾಜಿ, ಸಂತೋಷ ಜಿ., ರೇವಣಸಿದ್ದಯ್ಯ ಸ್ವಾಮಿ, ಅನಿಲ ದೊಡ್ಡಿ, ರೆಡ್ಡಿ, ಅರವಿಂದ ಜೋಗಿರೆ, ಮೋಹನಸಿಂಗ್ ರಜಪುತ, ಉದಯಕುಮಾರ ವಾರದ, ಯುವರಾಜ ಐಹೋಳೆ ಇದ್ದರು.
ಸಮಾಜದಲ್ಲಿದ್ದ ಅಸ್ಪೃಶ್ಯತೆ ಹೋಗಲಾಡಿಸಲು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಶ್ರಮಿಸಿದ್ದಾರೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಮಹಾತ್ಮರ ಹೆಸರಿನಲ್ಲಿ ವಿಚಾರ ಸಂಕಿರಣಗಳು ಆಯೋಜಿಸಿ ಯುವ ಸಮುದಾಯದವರಿಗೆ ಗುಣಮಟ್ಟದ ಶಿಕ್ಷಣದ ಮಹತ್ವ ಹಾಗೂ ಮಾನವೀಯ ಮೌಲ್ಯಗಳ ಕುರಿತು ಜಾಗೃತಿ ಮೂಡಿಸಬೇಕು. ಸಮಾಜ ಸೇವಾ ಸಂಘಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.
| ಶ್ರೀ ರೇಣುಕವೀರ ಗಂಗಾಧರ ಶಿವಾಚಾರ್ಯರು
ಪೀಠಾಧಿಪತಿ, ಹಿರೇಮಠ ಸಂಸ್ಥಾನ ಹುಮನಾಬಾದ್