

ಭಾಲ್ಕಿ: ಬುದ್ಧ-ಬಸವ-ಅಂಬೇಡ್ಕರ್ ಅವರ ತತ್ವ, ಆದರ್ಶಗಳು ಎಲ್ಲ ಕಾಲಕ್ಕೂ ಶ್ರೇಷ್ಠವಾಗಿವೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಪಟ್ಟಣದ ಹಿರೇಮಠ ಸಂಸ್ಥಾನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಶ್ರೀಗಳು, ಬಡತನದಲ್ಲಿ ಹುಟ್ಟಿದ ಅಂಬೇಡ್ಕರ್ ಅವರು ಸಾಕಷ್ಟು ನೋವು, ಸಂಕಷ್ಟಗಳನ್ನು ಎದುರಿಸಿ ಅಂತರಗಂದ ಆತ್ಮಬಲದ ಹೋರಾಟ ನಡೆಸಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದರು. ಸಮಾಜದ ಹಿತ, ಸಮಾಜದ ಕಲ್ಯಾಣಕ್ಕಾಗಿ ಬದುಕಿನುದ್ದಕ್ಕೂ ಹೋರಾಟ ಮಾಡಿ ಕೊಂಡು ಬಂದಿದ್ದರು. ಅವರು ರಚಿಸಿದ ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು.ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಿಲಾಸ ಮೋರೆ, ಪುರಸಭೆ ಸದಸ್ಯ ಓಂಕಾರ ಮೋರೆ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಶಿವಕುಮಾರ ಮೇತ್ರೆ, ಸಂಜೀವಕುಮಾರ ಭಾವಿಕಟ್ಟಿ, ಪ್ರವೀಣ ಮೋರೆ ಇತರರಿದ್ದರು.
ವೈಭವದ ಮೆರವಣಿಗೆ: ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ವೈಭವದಿಂದ ಮೆರವಣಿಗೆ ನಡೆಯಿತು. ಹಳೇ ಪಟ್ಟಣದ ಅಶೋಕ ನಗರದಿಂದ ವಿವಿಧ ದಲಿತ ಸಂಘಟನೆಗಳಿಂದ ಆರಂಭಗೊಂಡ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಹಿರೇಮಠ ಸಂಸ್ಥಾನ, ಚವಡಿ, ತಿನ್‌ದುಕಾನ್, ಗಡಿ ಏರಿಯಾ, ಬೊಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ ಸೇರಿ ಪಟ್ಟಣದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಡಿಜೆ ಸೌಂಡ್‌ಗೆ ಪ್ರಮುಖರು, ಯುವಕರು ಹೆಜ್ಜೆ ಹಾಕಿ ಮೆರವಣಿಗೆ ವೈಭವ ಹೆಚ್ಚಿಸಿದರು.