

ಚಾಮರಾಜನಗರ: ನಿಮಗೆ ನೀವೇ ಬೆಳಕು ಎಂಬಂತಹ ಸಾರ್ವಕಾಲಿಕ ಶ್ರೇಷ್ಠ ಹಾಗೂ ಅದ್ಭುತ ಚಿಂತನೆಗಳನ್ನು ಜನಸಾಮಾನ್ಯರಿಗೆ ಬೋಧಿಸಿದ ಭಗವಾನ್ ಬುದ್ಧ ಅವರು ಈ ಜಗತ್ತಿನ ಮೊದಲ ಮನೋ ವಿಜ್ಞಾನಿಯಾಗಿದ್ದಾರೆ ಎಂದು ಸಾಹಿತಿ ಡಾ.ಬಿ.ಆರ್. ಕೃಷ್ಣಕುಮಾರ್ ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 2569ನೇ ಬುದ್ಧ ಪೂರ್ಣಿಮೆ ಅಂಗವಾಗಿ ಆಯೋಜಿಸಲಾಗಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಬುದ್ಧ ಎಂದರೇ ಅರಿವು. ಬುದ್ಧಮಾರ್ಗ ಎಂದರೇ ಜಾಗೃತಿಯ ಮಾರ್ಗವಾಗಿದೆ. ವ್ಯಕ್ತಿಯು ತನ್ನ ಸಮಸ್ಯೆಗಳನ್ನು ತಾನೇ ಅರ್ಥೈಸಿಕೊಂಡು ಪರಿಹಾರ ಕಂಡುಕೊಳ್ಳಬೇಕು. ತಳಸಮುದಾಯಗಳನ್ನು ತಮ್ಮೆಡೆಗೆ ಸೆಳೆದು ಜೀವನ ಉನ್ನತೀಯಡೆಗೆ ಕೊಂಡೊಯ್ದ ಬುದ್ಧ ಪರಂಪರೆ ಇಂದಿಗೂ ಪ್ರಸ್ತುತವಾಗಿದೆ ಎಂದರು.
ಬುದ್ಧರ ಮೂರ್ತಿ ಮೆರವಣಿಗೆ:
ನಗರದ ಸಾರನಾಥ ಬೌದ್ಧವಿಹಾರದ ಮುಂಭಾಗ ಬಂತೇಜಿಗಳ ನೇತೃತ್ವದಲ್ಲಿ ಆರಂಭವಾದ ಭಗವಾನ್ ಬುದ್ಧ ಪ್ರತಿಮೆ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಡಳಿತ ಭವನ ತಲುಪಿತು. ಬಳಿಕ ಶಾಸಕ ಎ.ಆರ್ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ವೇದಿಕೆ ಕಾರ್ಯಕ್ರಮದ ಆರಂಭದಲ್ಲಿ ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಮತ್ತು ತಂಡ ನಡೆಸಿಕೊಟ್ಟ ಬುದ್ಧ ಗೀತಗಾಯನ ಕಾರ್ಯಕ್ರಮ ಗಮನ ಸೆಳೆಯಿತು.