ಬುದ್ಧ ಜಗತ್ತಿನ ಬೆಳಕು: ಪ್ರೊ.ಜಿ.ಹೇಮಂತ್‌ಕುಮಾರ್

1
Published on

ಮೈಸೂರು: ಯಾರಿಗೆ ಸ್ವಾಭಿಮಾನದ ಬದುಕು ಬೇಕೋ ಅವರು ಬುದ್ಧನನ್ನು ಅಪ್ಪಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಅಭಿಪ್ರಾಯಪಟ್ಟರು.


ಮಾನಸಗಂಗೋತ್ರಿಯ ಮೈವಿವಿ ಡಾ.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ 66ನೇ ಧಮ್ಮದೀಕ್ಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದು ಆಗಿ ಜನಿಸಿದೆ. ಆದರೆ, ಹಿಂದು ಆಗಿ ಸಾಯಲಾರೆ ಎಂದು ಡಾ.ಅಂಬೇಡ್ಕರ್ ಹೇಳಿದ್ದಕ್ಕೆ ಈ ಸಮಾಜವೇ ಕಾರಣ. ಅವರ ಚಿಂತನೆಗಳು, ಮಾರ್ಗಗಳನ್ನು ಇಂದಿನ ಯುವ ಪೀಳಿಗೆಗೆ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.


ದೇಶಕ್ಕೆ ಬುದ್ಧನ ಮಾರ್ಗದ ಅಗತ್ಯವಿದೆ. ಬುದ್ಧ ಜಗತ್ತಿನ ಬೆಳಕು. ಆ ಗುರುವನ್ನು ಒಪ್ಪುವವರು ಪರಿಶುದ್ಧವಾಗುತ್ತಾರೆ. ಅವರಿಗೆ ಭಯ, ಆಂತರಿಕ ಅಪಜಯ ಇರಲ್ಲ. ಬುದ್ಧನ ಪ್ರಜ್ಞೆ, ಕರುಣೆ, ಸಮತೆ ನಮ್ಮೆಲ್ಲರ ಬದುಕಿನ ಭಾಗವಾಗಬೇಕು. ನಾವು ಜೀವಿಸುವ, ಕಾರ್ಯನಿರ್ವಹಿಸುವ ಹಾಗೂ ಸಂಚರಿಸುವ ಸ್ಥಳಗಳಲ್ಲಿ ಬುದ್ಧನ ಕರುಣೆ ಪಸರಿಸಬೇಕು. ಮನುಷ್ಯನ ಉತ್ಕೃಷ್ಟ ಮನೋಭಾವದಿಂದ ಹೊರಹೊಮ್ಮುವ ಪರಿಪೂರ್ಣ ನ್ಯಾಯವೇ ಬುದ್ಧನು ಬೋಧಿಸಿದ ಧಮ್ಮ ಎಂಬ ಅಂಬೇಡ್ಕರ್ ಮಾತು ಅರಿತು ಜೀವಿಸಬೇಕಾಗಿದೆ ಎಂದರು.


ದುರ್ಬುದ್ಧಿ, ದುರಾಸೆ ಉಳ್ಳವರು ಮತ್ತು ಜಾತಿವಾದಿಗಳಿಗೆ ಬುದ್ಧನ ಧರ್ಮದಲ್ಲಿ ಅವಕಾಶವಿಲ್ಲ. ಧಮ್ಮ ಸ್ವೀಕರಿಸಿದ ಮೇಲೆ ದುರ್ಬುದ್ಧಿ ಉಳ್ಳವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ದುರಾಸೆ ಉಳ್ಳವರು ಬದುಕಿನ ಸತ್ಯವನ್ನು ಕಂಡುಕೊಳ್ಳುತ್ತಾರೆ. ಜಾತಿವಾದಿಗಳು ಧಮ್ಮಕ್ಕೆ ಶರಣಾದರೆ ಮನುಷ್ಯರಾಗುತ್ತಾರೆ ಎಂದು ಹೇಳಿದರು.


ಮೈಸೂರು ವಿಶ್ವವಿದ್ಯಾಲಯವು ಬೈಲಕುಪ್ಪೆಯ ಸೆರಾಜೆ ಮೊನಾಸ್ಟಿಕ್ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಬುದ್ಧ ಅಧ್ಯಯನ ಕೇಂದ್ರದ ಚಟುವಟಿಕೆಗಳು ಆರಂಭವಾಗಿದ್ದು, ಕೇಂದ್ರಕ್ಕೆ 10 ಕೋಟಿ ರೂ.ವಿಶೇಷ ಅನುದಾನ ಕಲ್ಪಿಸುವಂತೆ ಸಂಸದ ವಿ.ಶ್ರೀನಿವಾಸಪ್ರಸಾದ್ ಈಚೆಗೆ ಮೈಸೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೋರಿದ್ದಾರೆ. ಮುಂದಿನ ದಿನಗಳಲ್ಲಿ ಬೌದ್ಧ ಅಧ್ಯಯನದಲ್ಲಿ ಮೈಸೂರು ವಿಶ್ವವಿದ್ಯಾಲಯವು ವಿಶೇಷ ಸ್ಥಾನ ಗಳಿಸಲಿದೆ ಎಂದರು.


ತುಮಕೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಪ್ರೊ.ಬಿ.ರಮೇಶ್ ಅವರು ‘66 ವರ್ಷಗಳ ಧಮ್ಮದೀಕ್ಷಾ ನಡಿಗೆಯ ಪ್ರಗತಿ ಮತ್ತು ಸವಾಲುಗಳು’ ವಿಷಯ ಕುರಿತು ಮಾತನಾಡಿದರು.

ಬೈಲುಕುಪ್ಪೆಯ ಸೆರಾಜೆ ಮೊನಾಸ್ಟಿಕ್ ವಿಶ್ವವಿದ್ಯಾಲಯದ ಅನುವಾದ ವಿಭಾಗದ ನಿರ್ದೇಶಕ, ಬಿಕ್ಕು ಲೋಬ್‌ಸಂಗ್ ದೋರ್‌ಜಿ ಪಾಲ್‌ಜೋರ್, ಡಾ.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಎಸ್. ನರೇಂದ್ರಕುಮಾರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net