ಮಂಗಳೂರು : ಬುದ್ದಿವಾದ ಹೇಳಿದ್ದಕ್ಕೆ ತನ್ನ ದೊಡ್ಡಪ್ಪನ ಮಗನನ್ನೇ ಕೊಲೆಗೈದಿದ್ದ ಅಪರಾಧಿಗೆ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಸಪ್ಪ ಬಾಲಪ್ಪ ಜಕಾತಿ ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಬಂಟ್ವಾಳ ಬಾಳ್ತಿಲ ಗ್ರಾಮದ ಕೊಡಂಗೆ ಕೋಡಿಯ ನಿವಾಸಿ ರಾಜೇಶ ಯಾನೆ ನವೀನ ಶಿಕ್ಷೆಗೊಳಗಾದವ. ಈತ ತನ್ನ ದೊಡ್ಡಪ್ಪನ ಮಗ ರಂಜಿತ್ ಎಂಬವರನ್ನು 2017ರ ಮೇ 15ರಂದು ರಾತ್ರಿ ಕೊಲೆ ಮಾಡಿದ್ದ.
ಘಟನೆ ವಿವರ
ಶಿಕ್ಷೆಗೊಳಗಾದ ರಾಜೇಶ(27) ಮತ್ತು ಕೊಲೆಯಾದ ರಂಜಿತ್(27) ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕೊಡಂಗೆ ಕೋಡಿಯ ನಿವಾಸಿಗಳಾಗಿದ್ದು ಅಣ್ಣ ತಮ್ಮಿಂದಿರ ಮಕ್ಕಳು. ಇವರ ಮನೆಗಳು ಆಸುಪಾಸಿನಲ್ಲಿದ್ದವು. ಆರೋಪಿ ರಾಜೇಶನಿಗೆ ವಿಪರೀತ ಮದ್ಯ ಸೇವನೆ ಚಟವಿತ್ತು. ಆತನಿಗೆ ಬುದ್ಧಿ ಮಾತು ಹೇಳಿದರೂ ಕೇಳುತ್ತಿರಲಿಲ್ಲ. ಇದರಿಂದ ನೊಂದಿದ್ದ ಆತನ ಹೆತ್ತವರು ಆತನಿಗೆ ಬುದ್ಧಿ ಹೇಳುವಂತೆ ರಂಜಿತ್ ಮತ್ತು ಆತನ ತಂದೆತಾಯಿಯವರಿಗೆ ಹೇಳಿದ್ದರು. ಅದರಂತೆ ರಂಜಿತ್ ಹಲವು ಬಾರಿ ರಾಜೇಶನಿಗೆ ಬುದ್ದಿ ಮಾತು ಹೇಳಿದ್ದ. ಇದರಿಂದ ರಂಜಿತ್ ಮೇಲೆ ರಾಜೇಶನಿಗೆ ವೈಮನಸ್ಸು ಉಂಟಾಗಿತ್ತು. 2017ರ ಮೇ 15ರಂದು ರಾತ್ರಿ ಬಿ.ಸಿ.ರೋಡ್‌ನ ಬಾರ್‌ನಲ್ಲಿ ರಾಜೇಶ್ ಆತನ ಗೆಳೆಯರೊಂದಿಗೆ ಮದ್ಯಸೇವಿಸುತ್ತಿದ್ದ. ಆಗ ರಂಜಿತ್ ಬುದ್ದಿ ಮಾತು ಹೇಳಿದ. ಅಲ್ಲದೆ ರಾಜೇಶ್ ರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದಾಗ ಆತನನ್ನು ಶೇಡಿಗುರಿ ಎಂಬಲ್ಲಿ ತಡೆದು ನಿಲ್ಲಿಸಿ ಕೈಯಿಂದ ಹೊಡೆದಿದ್ದ. ಇದರಿಂದ ರಾಜೇಶ್ ಮತ್ತಷ್ಟು ಮುನಿಸಸಿಕೊಂಡು ಪ್ರತೀಕಾರವಾಗಿ ರಂಜಿತ್‌ನನ್ನು ಕೊಲೆ ಮಾಡಬೇಕು ಎಂದು ನಿರ್ಧರಿಸಿದ. ಅಂದು ರಾತ್ರಿ 10 ಗಂಟೆಯ ವೇಳೆಗೆ ರಂಜಿತ್ ತನ್ನ ಮನೆಗೆ ಹೋಗಿದ್ದ. ಆ ವೇಳೆ ರಾಜೇಶ್ ಕೈಯಲ್ಲಿ ಚೂರಿ ಹಿಡಿದುಕೊಂಡು ರಂಜಿತ್‌ನ ಮನೆಗೆ ಹೋಗಿ ರಂಜಿತ್‌ನ ತಂದೆ ಗಣೇಶ್ ಪೂಜಾರಿ ಅವರನ್ನು ಕರೆದಾಗ ಗಣೇಶ್ ಪೂಜಾರಿ, ಅನಂತರ ಅವರ ಪತ್ನಿ ಲಲಿತಾ ಮತ್ತು ಪುತ್ರ ರಂಜಿತ್ ಹೊರಗೆ ಬಂದರು. ಈ ವೇಳೆ ರಾಜೇಶ್ ಚೂರಿಯಿಂದ ರಂಜಿತ್‌ನ ಗಂಟಲಿಗೆ ಬಲವಾಗಿ ತಿವಿದ. ಅದನ್ನು ತಡೆಯಲು ಮುಂದಾದ ಗಣೇಶ್ ಪೂಜಾರಿ ಅವರ ಬಲಕೈಗೂ ಚೂರಿಯಿಂದ ಗಾಯವಾಗಿತ್ತು. ಆಗ ಅಕ್ಕಪಕ್ಕದವರು ಕೂಡ ಓಡಿ ಬಂದು ತೀವ್ರ ಗಾಯಗೊಂಡ ರಂಜಿತ್‌ನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆಗ ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿದ್ದು ಪ್ರಸ್ತುತ ಬೀದರ್ ಎಸ್‌ಪಿ ಆಗಿರುವ ನಾಗೇಶ್ ಡಿ.ಎಲ್. ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.