ಬಳ್ಳಾರಿ : ಇಲ್ಲಿನ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ದಲ್ಲಿ ಅಕ್ರಮ ಆರೋಪ ಕೇಳಿ ಬಂದಿದ್ದು, ರಾಜ್ಯ ಸರ್ಕಾರದಿಂದ ತನಿಖೆಗೆ ಆದೇಶಿಸಿದೆ.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 2024ರ ಮಾ. 7 ರಂದು ಹಾಗೂ ಜುಲೈ 8 ರಂದು ನಡೆದ ಸಭೆಯ ಎರಡು ನಡಾವಳಿಗಳಲ್ಲಿ ಸಾಕಷ್ಟು ಅಕ್ರಮವಾಗಿದೆ. ಬುಡಾ ಅಧ್ಯಕ್ಷರು ತಮ್ಮ ಅಧಿಕಾರ ದುರುಪಯೋಗಿಸಿಕೊಂಡು ನಿಯಮ ಮೀರಿ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ. ಅಲ್ಲದೆ, ಇತ್ತೀಚೆಗೆ ಲೋಕಯುಕ್ತ ದಾಳಿ ವೇಳೆ ಬುಡಾ ಕಚೇರಿ ಅಧಿಕಾರಿಗಳು ಟ್ರಾೃಪ್ ಆಗಿದ್ದಾರೆ. ಹೀಗಾಗಿ ಬುಡಾದಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿದ್ದು, ಈ ಕುರಿತು ತನಿಖೆ ನಡೆಸುವಂತೆ ಸಭೆಯ ನಡಾವಳಿ ರದ್ದುಪಡಿಸುವಂತೆ ಕಾಂಗ್ರೆಸ್ ಪಕ್ಷದ ಕಂಪ್ಲಿ ಶಾಸಕ ಜೆ. ಎನ್. ಗಣೇಶ ಹಾಗೂ ನಗರ ಶಾಸಕ ನಾರಾ ಭರತರೆಡ್ಡಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದರ ಹಿನ್ನಲೆ ಧಾರವಾಡ ವಲಯ ಕಚೇರಿಯ ನಗರ ಮತ್ತು ಗ್ರಾಮಾಂತರ ಯೋಜನಾ ಅಪರ ನಿರ್ದೇಶಕ ನೇತೃತ್ವದಲ್ಲಿ ಅ. 3 ರಿಂದ 5 ರವರೆಗೆ ಬುಡಾ ಕಚೇರಿಯಲ್ಲಿ ತನಿಖೆ ತಂಡ ಮೂರು ದಿನಗಳ ಕಾಲ ಕಡತಗಳ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.