

ಬಳ್ಳಾರಿ : ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಹಗರಣ ಖಂಡಿಸಿ, ಇಲ್ಲಿನ ಗಡಗಿ ಚೆನ್ನಪ್ಪ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಮಂಗಳವಾರ ಪ್ರತಿಭಟಿಸಿದರು.
ಬಿಜೆಪಿ ಜಿಲ್ಲಾದ್ಯಕ್ಷ ಅನಿಲ್ ಕುಮಾರ ಮಾತನಾಡಿ, ಬುಡಾದಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸ್ವಪಕ್ಷದ ಶಾಸಕ ನಾರಾ ಭರತರೆಡ್ಡಿ, ಕಂಪ್ಲಿ ಶಾಸಕ ಜೆ. ಎನ್. ಗಣೇಶ ಸರ್ಕಾರಕ್ಕೆ ಪತ್ರ ಬರೆದು ದೂರು ನೀಡಿದ್ದಾರೆ. ಅಕ್ರಮ ನಡೆದಿದೆ ಎಂದು ಸ್ವಪಕ್ಷದಿಂದಲೇ ಒಪ್ಪಿಕೊಂಡಿದೆ. ಕೂಡಲೇ ನಿಪಕ್ಷಪಾತ ತನಿಖೆ ನಡೆಸಿ ಬಹಿರಂಗಪಡಿಸಬೇಕು. ಬುಡಾದಲ್ಲಿ ಬಡ ಜನರ ಯಾವುದೇ ಕೆಲಸಗಳು ಆಗುತ್ತಿಲ್ಲ. ದುಡ್ಡು ಕೊಟ್ಟರೆ ಮಾತ್ರ ಕೆಲಸ ಮಾಡಿ ಕೊಡುವ ಪದ್ಧತಿ ಬೆಳೆದುಕೊಂಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಪಾಳೆಯದಲ್ಲಿ ಶೀತಲ ಸಮರ ಪ್ರಾರಂಭವಾಗಿದೆ. ಅವರ ಜಗಳ ಬಡ ಜನರಿಗೆ ತೊಂದರೆ ಆಗುತ್ತಿದೆ. ಹಾಗಾಗಿ ಈ ಭ್ರಷ್ಟಾಚಾರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೆವೆ. ಬುಡಾ ಅಧ್ಯಕ್ಷರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಮುಡಾ, ಬಳ್ಳಾರಿಯಲ್ಲಿ ಬುಡಾ ಹಗರಣ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಪ್ರತಿ ಜಿಲ್ಲೆ, ಗ್ರಾಮಗಳಲ್ಲಿ ಭ್ರಷ್ಟಾಚಾರಕ್ಕೆ ನಿಂತಿದೆ. ರಾಜ್ಯದಲ್ಲಿ ಮುಡಾ ಹಗರಣದಲ್ಲಿ ಸೈಟು ಹಂಚಿಕೆಯಲ್ಲಿ ಭ್ರಷ್ಟಾಚಾರ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ. ಬಳ್ಳಾರಿಯಲ್ಲಿ ಬುಡಾ ಹಗರಣಕ್ಕೆ ಸಂಬಂಸಿದಂತೆ ತನಿಖೆ ಮಾಡಬೇಕಿದೆ. ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಬೇಕಿದೆ ಎಂದು ತಿಳಿಸಿದರು. ಬಳಿಕ ನೂರರು ಬಿಜೆಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ಭ್ರಷ್ಟಾಚಾರ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ, ಕಳ್ಳ ಕಾಂಗ್ರೆಸ್ ಸರ್ಕಾರ ದಿಕ್ಕಾರ ಎಂಬ ಘೋಷಣೆಗಳನ್ನು ಕೂಗಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.