ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಡಬುಡಿಕೆ ರೀತಿ ಆಡಳಿತ ನಡೆಸುತ್ತಿದ್ದಾರೆ. ಅಹಿಂದ ಹೆಸರಲ್ಲಿ ಡೋಲು ಬಾರಿಸುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಲೇವಡಿ ಮಾಡಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ಯಾಕೆ ಮಾಡುತ್ತಿದ್ದಾರೆ? ಕಾಂಗ್ರೆಸ್ ಸಮಾವೇಶ ಮಾಡಬಹುದಿತ್ತಲ್ಲ. ಹಗರಣಗಳ ಸರಮಾಲೆ ಕೊರಳಿಗೆ ಸುತ್ತಿಕೊಂಡಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಗಮನ ಬೇರೆಡೆ ಸೆಳೆಯಲು ಇಂಥ ಗಿಮಿಕ್ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಎಲ್ಲ ಪಕ್ಷಗಳಲ್ಲಿಯೂ ಸಣ್ಣ ಪುಟ್ಟ ಸಮಸ್ಯೆಗಳು ಇರುವುದು ಸಹಜ. ಪಕ್ಷದಲ್ಲಿನ ಗೊಂದಲಗಳನ್ನು ಪರಿಹರಿಸುವಷ್ಟು ನಮ್ಮ ಹೈಕಮಾಂಡ್ ಶಕ್ತಿಯುತವಾಗಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅಧಿವೇಶನದ ಹಿನ್ನೆಲೆಯಲ್ಲಿ ನಾನು ದೆಹಲಿಗೆ ತೆರಳುತ್ತಿದ್ದೇನೆ. ಯತ್ನಾಳ ಅವರು ಯಾಕೆ ದೆಹಲಿಗೆ ಹೋಗುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದರು.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಯತ್ನಾಳ ಅವರು ಒಂದೇ ವಿಷಯಕ್ಕೆ ಹೋರಾಟ ಮಾಡುತ್ತಿದ್ದಾರೆ. ರೈತರ ಜಮೀನು, ಶ್ರದ್ಧಾ ಕೇಂದ್ರಗಳು ವಕ್ಪ್ ಆಸ್ತಿ ಆಗಬಾರದು ಎಂಬುವುದೇ ಎಲ್ಲರ ಗುರಿ. ನಮ್ಮ ಹೋರಾಟ ಪಕ್ಷದ ವತಿಯಿಂದಲೇ ನಡೆಯುತ್ತಿದೆ ಎಂದು ಹೇಳಿದರು.