

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬುಡಕಟ್ಟು ಸಾಂಸ್ಕೃತಿಕ ಕಲಾಲೋಕ ಅನಾವರಣಗೊಂಡಿತ್ತು. ಬಿರ್ಸಾ ಮುಂಡಾ ಜಯಂತಿ ಹಾಗೂ ಜನಜಾತೀಯ ಗೌರವ ದಿವಸ್ ಅಂಗವಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಬುಡಕಟ್ಟು ಸಮುದಾಯದ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ ನಡೆಯಿತು.
ಬುಡಕಟ್ಟು ಸಮುದಾಯದ ನಾಯಕರಾದ ಬಿರ್ಸಾ ಮುಂಡಾ ಭಾವಚಿತ್ರಕ್ಕೆ ಅರಮನೆ ಆವರಣದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಗಣ್ಯರು ಪುಷ್ಪ ನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಬುಡಕಟ್ಟು ಸಮುದಾಯದ 16 ಪಂಗಡಗಳು ತಮ್ಮ ಮೂಲ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿ ಆದಿವಾಸಿಗಳ ಸಾಂಸ್ಕೃತಿಕ ವೈಭವ ಪರಿಚಯಿಸಿದರು.
ಸ್ತಬ್ಧಚಿತ್ರದೊಂದಿಗೆ ವಿವಿಧ ಆದಿವಾಸಿ ಪಂಗಡದ ಸಾಂಸ್ಕೃತಿಕ ಕಲಾ ತಂಡದ ಕಲಾವಿದರು ಪಾಲ್ಗೊಂಡು ಗಮನಸೆಳೆದರು. ಕೆ.ಆರ್.ವೃತ್ತದ ಮೂಲಕ ಸಾಗಿದ ಮೆರವಣಿಗೆಯು ಡಿ.ದೇವರಾಜ ಅರಸ್ ರಸ್ತೆ, ಜೆಎಲ್‌ಬಿ ರಸ್ತೆ, ವಿನೋಬಾ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು.
ಸೋಲಿಗ ಸಮುದಾಯದ ಕಾಟಿ ವೇಷ ತಂಡ(ಮೈಸೂರು), ಕೊಡಗಿನ ಕುಡಿಯ ಸಮುದಾಯ ಊರಟ್ಟಿ ಕೊಟ್ಟು ತಂಡ(ಕೊಡಗು), ದಕ್ಷಿಣ ಕನ್ನಡದ ಕೊರಗ ಸಮುದಾಯ ಜಗಮೇಳ, ಮಂಡ್ಯ ಜಿಲ್ಲೆಯ ನಾಯಕ ಸಮುದಾಯ ಪೂಜಾ ಕುಣಿತ, ಮೈಸೂರಿನ ನಾಯಕ ಸಮುದಾಯ ಚಿಲಿಪಿಲಿ ಗೊಂಬೆ ತಂಡ, ವಿಜಯನಗರ ಜಿಲ್ಲೆಯ ಹರಣ್ ಶಿಕಾರಿ ಸಮುದಾಯದ ತಾಂಷರಾಂಡ ಮೋಲ್ ನೃತ್ಯ, ಉತ್ತರ ಕನ್ನಡದ ಸಿದ್ದಿ ಸಮುದಾಯ ದಾಮಾಮಿ ನೃತ್ಯ, ಢಕ್ಕೆ ಕುಣಿತ, ರಾಮನಗರ ಜಿಲ್ಲೆಯ ಇರುಳಿಗ ಪಂಗಡದ ಇರುಳಿಗ ನೃತ್ಯ, ಚಿಕ್ಕಮಗಳೂರು ಜಿಲ್ಲೆಯ ಗೌಡಲು ಕರಡಿ ಕುಣಿತ, ಚಾಮರಾಜನಗರ ಜಿಲ್ಲೆಯ ಸೋಲಿಗ ಸಮುದಾಯದ ಗೋರುಕಾನ ನೃತ್ಯ, ಮೈಸೂರು ಜಿಲ್ಲೆಯ ಜೇನು ಕುರುಬರ ಕೋಲಾಟ ತಂಡ, ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಪಂಗಡದ ವನಸಿರಿ ಕಲಾ ತಂಡದ ನೃತ್ಯ, ಕೊಡಗು ಜಿಲ್ಲೆಯ ಯರವ ಪಂಗಡದ ಚಿನಿ ತುಡಿ ನೃತ್ಯ, ಚಾಮರಾಜನಗರದ ಸೋಲಿಗ ಪಂಗಡದ ಆದಿವಾಸಿ ವಾಲಗ ನೃತ್ಯ ಹಾಗೂ ವಿಜಯನಗರದ ಕಂಪ್ಲಿಯ ಹರಣ್ ಶಿಕಾರಿ ಪಂಗಡದ ಆದಿವಾಸಿ ಮಹಿಳಾ ಬುಡಕಟ್ಟು ನೃತ್ಯದ ಆಕರ್ಷಿಸಿತು.
ಎಲ್ಲ ಆದಿವಾಸಿ ಪಂಗಡಗಳ ಜನರು ತಮ್ಮ ಸಾಂಪ್ರದಾಯಿಕ ಉಡುಪಿನೊಂದಿಗೆ ವಿವಿಧ ಸಂಗೀತ ಪರಿಕರ ನುಡಿಸಿ, ಗೀತ ಗಾಯನ, ನೃತ್ಯ ಪ್ರದರ್ಶಿಸುವ ಮೂಲಕ ದಾರಿಯುದ್ದಕ್ಕೂ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಸಾಂಪ್ರದಾಯಿಕ ನೃತ್ಯ, ಗೀತೆಗಳ ಗಾಯನದ ಮೂಲಕ ಸಂಭ್ರಮಿಸುವುದರೊಂದಿಗೆ ನಾಡಿನ ಜನರಿಗೆ ಕಾಡಿನ ಸಂಪ್ರದಾಯದ ಪರಿಚಯ ಮಾಡಿಕೊಟ್ಟರು.
ಆದಿವಾಸಿಗಳಿಗೆ ಮೀಸಲಾತಿ:
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಆದಿವಾಸಿಗಳ ಸ್ಥಿತಿ ಇಂದಿಗೂ ಶೋಚನೀಯವಾಗಿದೆ. ಆರ್ಥಿಕವಾಗಿ ಹಿಂದುಳಿದಿದ್ದಾರೆ. ಬುಡಕಟ್ಟು ಸಮುದಾಯಕ್ಕೆ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತಂದು ಸಂಕಷ್ಟದಲ್ಲಿರುವ ಆದಿವಾಸಿ ಸಮುದಾಯದವರ ಆರ್ಥಿಕ ಸ್ಥಿತಿಗತಿ ಸುಧಾರಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರ ಎಲ್ಲ ಸಮುದಾಯಕ್ಕೂ ಮೀಸಲಾತಿ ನೀಡುತ್ತದೆ. ಆದರೆ, ಆದಿವಾಸಿ ಸಮುದಾಯಕ್ಕೆ ವಿಶೇಷವಾದ ಮೀಸಲಾತಿ ನೀಡಬೇಕು. ಅವರ ದುಸ್ಥಿತಿಯಲ್ಲಿರುವ ಮನೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಾಸಕ ಅಶ್ವಿನ್‌ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ಶ್ರೀನಿವಾಸ್, ಉಪ ಮೇಯರ್ ಡಾ.ಜಿ.ರೂಪಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಪಿ.ಎಸ್.ಕಾಂತರಾಜು, ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ರಾಜೇಶ್ ಜಿ.ಗೌಡ ಇತರರು ಪಾಲ್ಗೊಂಡಿದ್ದರು.