ಬುಡಕಟ್ಟು ಸಮುದಾಯಕ್ಕೂ ‘ಧರ್ಮ’ ಪ್ರವೇಶ

IMG-20230821-WA0003
Published on

ಮೈಸೂರು: ಬುಡಕಟ್ಟು ಸಮುದಾಯಗಳ ನಡುವೆ ಇದೀಗ ಧರ್ಮ ಪ್ರವೇಶ ಮಾಡಿರುವುದು ಆಘಾತಕಾರಿ ಸಂಗತಿ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವಿಶೇಷ ಅಧಿಕಾರಿ ಡಾ.ವೆಂಕಟಗಿರಿ ದಳವಾಯಿ ಕಳವಳ ವ್ಯಕ್ತಪಡಿಸಿದರು.


ನಗರದ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ‘ಭಾರತದಲ್ಲಿ ಬುಡಕಟ್ಟು ಪರಿವರ್ತನೆ: ಸಮಸ್ಯೆಗಳು ಮತ್ತು ಸವಾಲುಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.


ಗಾಳಿ, ನೀರು, ಬೆಳಕು ಈ ಹಿಂದೆ ಆದಿವಾಸಿಗಳ ಧರ್ಮವಾಗಿತ್ತು. ಆದರೀಗ ಹಿಂದು, ಕ್ರೈಸ್ತ, ಮುಸ್ಲಿಂ ಧರ್ಮಗಳ ಪ್ರವೇಶವಾಗಿದ್ದು, ಅದರಲ್ಲೂ ವಿಭಜಿಸಲಾಗಿದೆ. ಹಿಂದು ಬುಡಕಟ್ಟು ಸಮುದಾಯಗಳಿಗೆ ಹೆಚ್ಚಿನ ಅವಕಾಶಗಳು ದೊರೆತರೆ, ಕ್ರೈಸ್ತ, ಮುಸ್ಲಿಂ ಬುಡಕಟ್ಟು ಜನರು ಅವಕಾಶ ವಂಚಿತರಾಗಿದ್ದಾರೆ. ಈ ರೀತಿಯ ತಾರತಮ್ಯ ಏಕೆ? ಇದನ್ನು ಸೃಷ್ಟಿಸಿದವರು ಯಾರು ಎಂದು ಪ್ರಶ್ನಿಸಿದರು.


ಅರಣ್ಯ ವಾಸಿಗಳಿಗೆ ಆಧುನಿಕತೆಯೊಂದಿಗೆ ಗುದ್ದಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರವೂ ನೆರವಿಗೆ ಬರುತ್ತಿಲ್ಲ. ಆದ್ದರಿಂದ ಬುಡಕಟ್ಟು ಸಮುದಾಯ ಕೇಂದ್ರಿತ ಅಭಿವೃದ್ಧಿ ಆಗಬೇಕು. ಅದರೊಂದಿಗೆ, ಅವರ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಜತೆಗೆ ಅವರ ಅಸ್ತಿತ್ವ, ಗುರುತು ಉಳಿಸಿಕೊಂಡು ಆಧುನಿಕ ಸಮಾಜದೊಂದಿಗೆ ಅನುಸಂದಾನ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಆದಿವಾಸಿಗಳನ್ನು ನೋಡುವ ಮತ್ತು ಅಧ್ಯಯನ ದೃಷ್ಟಿಕೋನವೇ ಬದಲಾಗಬೇಕು. ಈಗಲೂ ಈ ಸಮುದಾಯದವರನ್ನು ‘ಅವರು’ ಎಂದೇ ಉಲ್ಲೇಖಿಸುತ್ತೇವೆಯೇ ಹೊರತು, ನಾವುಗಳು ಎಂದು ಕರೆಯಲ್ಲ. ಅವರು ‘ನಾವುಗಳು’ ಆಗುವುದು ಯಾವಾಗ ಎಂದು ಪ್ರಶ್ನಿಸಿದರು.
ಬುಡಕಟ್ಟು ಜನರು ಅಧಿಕ ಸಂತಾನದ ಪ್ರಾಣಿಗಳನ್ನು ಮಾತ್ರ ಬೇಟೆಯಾಡುತ್ತಾರೆ. ಜಿಂಕೆ, ಹಂದಿ ಬೇಟೆಯಾಡುವುದನ್ನು ಪುರಾಣದಲ್ಲೂ ಉಲ್ಲೇಖ ಮಾಡಲಾಗಿದೆ. ಈ ರೀತಿ ಆಹಾರ ಪದ್ಧತಿಯನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ಇದುವೇ ಅವರ ಅರಣ್ಯ ಪ್ರೀತಿ. ಆದರೆ, ಅವರ ಈ ಪ್ರೀತಿಯನ್ನೇ ಪ್ರಭುತ್ವ ಅನುಮಾನಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಕಾಡಿನಲ್ಲಿ ದೊರೆಯುವ ಆಹಾರ, ಸಸ್ಯಗಳನ್ನು ಬುಡಕಟ್ಟು ಜನರು ಮುಟ್ಟದಂತೆ ಮಾಡಲಾಗಿದೆ. ಹೀಗಾದರೆ, ಅವರು ಎಲ್ಲಿಗೆ ಹೋಗಬೇಕು? ರೆಸಾರ್ಟ್, ಜಲಾಶಯಗಳು ಸೇರಿದಂತೆ ಇನ್ನಿತರ ಯೋಜನೆಗಳು ಆದಿವಾಸಿ ಸಮುದಾಯದ ಕೇಂದ್ರಿತವಾಗಿಲ್ಲ. ಅರಣ್ಯದಲ್ಲಿ ಕಾಡಿನ ಮಕ್ಕಳನ್ನೇ ನಿರ್ಲಕ್ಷಿಸಲಾಗುತ್ತಿದೆ ಎಂದು ಕಿಡಿಕಾರಿದರು.


ಸಂಸ್ಥೆಯ ನಿರ್ದೇಶಕ ಪ್ರೊ.ಎಲ್.ಶ್ರೀನಿವಾಸ್ ಮಾತನಾಡಿ, ನಮ್ಮ ಸಂಸ್ಥೆಯಿಂದ 26 ಸಮುದಾಯಗಳ ಕುಲಶಾಸ್ತ್ರ ಅಧ್ಯಯನವನ್ನು ಪೂರ್ಣಗೊಳಿಸಲಾಗಿದೆ. 18 ಸರ್ಕಾರಿ ಕೆಲಸ-ಕಾರ್ಯಗಳ ಮೌಲ್ಯಮಾಪನ ಮಾಡಿ ವರದಿ ನೀಡಲಾಗಿದೆ ಎಂದು ತಿಳಿಸಿದರು.


ನಮ್ಮ ಸಂಸ್ಥೆ ಆದಿವಾಸಿಗಳ ಸ್ಥಿತಿಗತಿ ಅಧ್ಯಯನ ಮಾಡುತ್ತಿದೆ. ಬುಡಕಟ್ಟು ಭಾಷಾ ನಿಘಂಟು ಸಿದ್ಧಪಡಿಸಲಾಗಿದೆ. ಆದಿವಾಸಿಗಳ ಭಾಷೆಯನ್ನು ಉಳಿಸಲು ಸದ್ಯಕ್ಕೆ ಜೇನುಕುರುಬ, ಕೊರವ ಸಮುದಾಯದ ಭಾಷಾ ಕಲಿಕಾ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಆಶ್ರಮ ಶಾಲೆಯ ಬೋಧಕರಿಗೂ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ತಿಳಿಸಿದರು.


ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ.ಕಲ್ಲೇಶ್, ಪ್ರಾಧ್ಯಾಪಕ ಪ್ರೊ.ಎಂ.ಜಡೇಗೌಡ, ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್.ಪ್ರಭಾ, ಸಂಶೋಧನಾ ಅಧಿಕಾರಿ ಸಿ.ಶಿವಕುಮಾರ್ ಇದ್ದರು.

ಬೆಟ್ಟದ ತುದಿಯಲ್ಲಿ ಕುಳಿತು ಸುನಾಮಿ ವೀಕ್ಷಣೆ
ಅಂಡಮಾನ್ ದ್ವೀಪದಲ್ಲಿರುವ ಜರಾವ್ ಬುಡಕಟ್ಟು ಜನರು ಸುನಾಮಿಯಿಂದ ಪಾರಾದ ರೋಚಕ ಕಥೆಯನ್ನು ಡಾ.ವೆಂಕಟಗಿರಿ ದಳವಾಯಿ ಹೇಳಿದರು.

ಸುನಾಮಿ ಕುರಿತು ಒಂದು ವಾರ ಮುನ್ನವೇ ಪ್ರಕೃತಿ ಮುನ್ಸೂಚನೆ ಕೊಟ್ಟಿತ್ತು. ಸಮುದ್ರದ ಆಳದ ಅಪರೂಪದ ಸಾವಿರಾರು ಮೀನುಗಳು ದಂಡೆಗೆ ಬಂದಿದ್ದವು. ಗಾಳಿ ಅಬ್ಬರಕ್ಕೆ ತೆಂಗಿನ ಮರ ನೆಲಕ್ಕೆ ತಾಗುತ್ತಿತ್ತು. ಸಾಕುಪ್ರಾಣಿಗಳು ವಿಚಿತ್ರವಾಗಿ ಬೋಗಳುತ್ತಿದ್ದವು. ಇದನ್ನು ಗಮನಿಸಿದ ಆದಿವಾಸಿಗಳು ಸಾಕುಪ್ರಾಣಿಗಳು, ಸಾಮಗ್ರಿಗಳೊಂದಿಗೆ ಬೆಟ್ಟದ ತುದಿಗೆ ತೆರಳಿ ಸುನಾಮಿಯನ್ನು ವೀಕ್ಷಿಸಿದ್ದರು ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net