

ಹನೂರು: ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಮಂಗಳವಾರ ಸಮಾಜ ಸೇವಕ ನಿಶಾಂತ್ ಅವರು ಗಿರಿಜನರ ಸಮ್ಮುಖದಲ್ಲಿ ಬಿರ್ಸಾಮುಂಡಾ ಜಯಂತಿ ಅಚರಿಸಿದರು.
ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಬಿರ್ಸಾಮುಂಡಾ ಅವರು ಬ್ರಿಟಿಷರ ವಿರುದ್ಧ ಧಂಗೆ ಏಳುವುದರ ಮೂಲಕ ಭಾರತೀಯ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಜನಪದ ನಾಯಕರಾಗಿದ್ದಾರೆ. ಇವರು ಬುಡಕಟ್ಟು ಸಮುದಾಯವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಸಮುದಾಯಕ್ಕೆ ತನ್ನದೆ ಆದ ಕೊಡುಗೆ ನೀಡಿದ್ದಾರೆ ಎಂದರು.
ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಹನೂರು ಭಾಗದಲ್ಲಿ ಸುಮಾರು 80ಕ್ಕೂ ಹೆಚ್ಚು ಗಿರಿಜನರ ಪೋಡುಗಳಿದ್ದು ಇನ್ನು ಮುಂದೆ ಪ್ರತಿ ವರ್ಷ ಹನೂರಿನಲ್ಲಿ ಬಿರ್ಸಾ ಮುಂಡಾ ಜಯಂತಿ ಅಚರಿಸಲಾಗವುದು ಎಂದು ತಿಳಿಸಿದರು.
ಇದೇ ವೇಳೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ತಾಲೂಕಿನ ಜೀರಿಗೆಗದ್ದೆ ಗ್ರಾಮದ ಮಾದಮ್ಮ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಪಟ್ಟಣದ ಪೆಟ್ರೋಲ್ ಬಂಕ್‌ನಿಂದ ಬಸ್ ನಿಲ್ದಾಣಕ್ಕೆ ಮೆರವಣಿಗೆಯ ಮೂಲಕ ಆಗಮಿಸುವ ವೇಳೆ ಗಿರಿಜನ ಮಹಿಳೆಯರು ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಮುಖಂಡರಾದ ರಂಗೇಗೌಡ, ಶಿವಮೂರ್ತಿ, ನಟರಾಜು, ಕರಿಯಪ್ಪ, ಮಾದೇವ, ಕಿರಣ್ ಇತರರು ಇದ್ದರು.