ಬುಡಕಟ್ಟು ಯುವ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಸಂಪನ್ನ

5
Published on

ಮೈಸೂರು: ಆದಿವಾಸಿ ಮಕ್ಕಳ ಸಂಸ್ಕೃತಿ ಅನಾವರಣಕ್ಕೆ ವೇದಿಕೆಯಾದ 14ನೇ ಬುಡಕಟ್ಟು ಯುವ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಮಂಗಳವಾರ ಸಮಾರೋಪಗೊಂಡಿತು.


ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಗೃಹ ವ್ಯವಹಾರಗಳ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಸಹಯೋಗದಲ್ಲಿ ಮೈಸೂರು ವಿವಿ ಲಲಿತಕಲಾ ಕಾಲೇಜಿನಲ್ಲಿ 7 ದಿನಗಳಿಂದ ನಡೆದ ಬುಡಕಟ್ಟು ಉತ್ಸವ ಮುಕ್ತಾಯಗೊಂಡಿತು.


ಬೇರೆ ಬೇರೆ ರಾಜ್ಯಗಳ ಬುಡಕಟ್ಟು ಸಂಸ್ಕೃತಿ, ಕಲೆ, ಆಹಾರ ಪದ್ಧತಿಗಳು, ಆಚಾರ-ವಿಚಾರ, ಉಡುಗೆ-ತೊಡುಗೆ, ಸ್ಥಳ ಪರಿಚಯ, ಭಾಷಾ ಕಲಿಕೆ ಮತ್ತು ಅಭಿವೃದ್ಧಿ ಕಾರ್ಯಕ್ರಮ ನಡೆದವು. ಛತ್ತೀಸ್‌ಗಡ, ಜಾರ್ಖಂಡ್, ಒಡಿಶಾ, ತೆಲಂಗಾಣ, ಮಹಾರಾಷ್ಟ್ರ , ಬಿಹಾರ ಸೇರಿದಂತೆ ವಿವಿಧ ರಾಜ್ಯಗಳ 200 ಯುವ ಜನರು ಮತ್ತು 20 ಜನ ಉಸ್ತುವಾರಿ ಅಧಿಕಾರಿಗಳು ಭಾಗವಹಿಸಿ ಸಾಂಸ್ಕೃತಿಕ ವಿನಿಮಯ ಮಾಡಿಕೊಂಡರು.
ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣ ವಿಷಯದ ಭಾಷಣಸ್ಪರ್ಧೆ, ಜಾನಪದ ನೃತ್ಯ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಭಾಷಣ ಸ್ಪರ್ಧೆ: ಛತ್ತೀಸ್‌ಗಡದ ಪಂಕಜ್ ಸಿನ್ಹಾ (ಪ್ರಥಮ), ಒಡಿಶಾದ ತರುಣ್ ಮಹಿನಿ (ದ್ವಿತೀಯ), ಜಾರ್ಖಂಡ್ ಸಂದೀಪ್ ಕುಮಾರ್ ಯಾದವ್ (ತೃತೀಯ), ಆಶಿಶ್ (ನಾಲ್ಕನೇ), ತೆಲಂಗಾಣದ ಸಿಂಧು (ಐದನೇ) ಬಹುಮಾನ ಪಡೆದರು.
ಜಾನಪದ ನೃತ್ಯ: ಛತ್ತೀಸ್‌ಗಡದ ಡೊಂಗ್ರಿದಾಡೆ ತಂಡ (ಪ್ರ), ತೆಲಂಗಾಣ ರೈತು ನೃತ್ಯ (ದ್ವಿ), ಒಡಿಶಾದ ಗುಂಪು ನೃತ್ಯ (ತೃ), ಛತ್ತೀಸ್‌ಗಡದ ಅಬ್ಜು ಮಾದೀಯಾ ಸಂಸ್ಕೃತಿ ಕೃತಿಯಾ (ನಾಲ್ಕನೇ), ಜಾರ್ಖಂಡ್‌ನ ಸಾತಾಲಿ ನೃತ್ಯ (ಐದನೇ) ಬಹುಮಾನ ಪಡೆಯಿತು.


ಆದಿವಾಸಿಗಳ ಪುನರ್ವಸತಿ: ಸಮಾರೋಪ ಸಮಾರಂಭದಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ಬುಡಕಟ್ಟು ಜನರಿಗೆ ಪುನರ್ವಸತಿ ಕಲ್ಪಿಸುವ ಮಾನವೀಯ ದೃಷ್ಟಿಯಿಂದ ಆಯೋಜಿಸಿದ ಕಾರ್ಯಕ್ರಮ ಯಶಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ನೆಹರು ಯುವ ಕೇಂದ್ರ ಸಂಘಟನೆ ರಾಜ್ಯ ನಿರ್ದೇಶಕ ಎಂ.ಎನ್.ನಟರಾಜ್ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net