ಬುಡಕಟ್ಟು ಅಭಿವೃದ್ಧಿ ಮಾದರಿಯೇ ಜಾರಿಗೆ ಬರಲಿ

16
Published on

ಮೈಸೂರು: ಬುಡಕಟ್ಟು ಜನರಿಗೆ ಆಧುನಿಕ ಅಭಿವೃದ್ಧಿ ಮಾದರಿ ಬೇಕಿಲ್ಲ. ಬದಲಿಗೆ ಅವರ ಅಭಿವೃದ್ಧಿ ಮಾದರಿಯನ್ನೇ ಜಾರಿಗೆ ತರಬೇಕು. ಆ ಪ್ರಕಾರವೇ ನೀತಿ-ನಿರ್ಣಯ ರೂಪುಗೊಳ್ಳಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಎಂ.ಮೇತ್ರಿ ಹೇಳಿದರು.


ದಟ್ಟಗಳ್ಳಿಯ ನ್ಯಾಯಾಂಗ ಬಡಾವಣೆಯಲ್ಲಿರುವ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ‘ಭಾರತದಲ್ಲಿ ಬುಡಕಟ್ಟು ಪರಿವರ್ತನೆ: ಸಮಸ್ಯೆಗಳು ಮತ್ತು ಸವಾಲುಗಳ’ ಕುರಿತ ರಾಷ್ಟ್ರೀಯ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಆದಿವಾಸಿಗಳು ಮ್ಯೂಸಿಯಂ ವಸ್ತುಗಳಲ್ಲ. ಅವರೂ ಮನುಷ್ಯರು. ಆಧುನಿಕ ಅಭಿವೃದ್ಧಿ ಮಾದರಿ ಅವರನ್ನು ನಾಶ ಮಾಡುತ್ತಿದೆ. ಅವರ ಭಾಷೆ, ಉಡುಗೆ, ಆಹಾರ, ಜೀವನಶೈಲಿ, ಸಂಸ್ಕೃತಿ, ಪರಂಪರೆಗಳು ಅವನತಿಯಾಗುತ್ತಿವೆ. ಆಧುನಿಕತೆಯಿಂದ ಬುಡಕಟ್ಟು ಜನರು ತಮ್ಮತನವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಆದಿವಾಸಿಗಳ ಜ್ಞಾನ, ಸಾಂಪ್ರದಾಯಿಕ ಕೌಶಲ, ಚಿತ್ರಕಲೆಗಳಿಗೆ ನಾವು ಮಾನ್ಯತೆ ಕೊಡುತ್ತಿಲ್ಲ. ಆಧುನಿಕ ಕಲಿಕೆಯನ್ನು ಅವರ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ. ಪುನರ್ವಸತಿ ಯೋಜನೆಯ ಆಸೆ ತೋರಿಸಿ ಅವರನ್ನು ಅರಣ್ಯದಿಂದ ಹೊರ ಕಳುಹಿಸಲಾಗುತ್ತಿದೆ. ಇದು ವ್ಯವಸ್ಥಿತವಾಗಿ ನಡೆಯುತ್ತಿದೆ. ಕಾಡಿನಿಂದ ನಾಡಿಗೆ ಬಂದವರೂ ನೆಲೆ ಕಳೆದುಕೊಂಡು ಜೀವನ, ನೆಮ್ಮದಿ ಹಾಳು ಮಾಡಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅರಣ್ಯ ಮತ್ತು ವನ್ಯಜೀವಿ ಕಾಯ್ದೆ ಆದಿವಾಸಿ ಜನರ ಬದುಕನ್ನು ಕಿತ್ತುಕೊಂಡಿದೆ. ಆಹಾರ ಪದ್ಧತಿ ಮತ್ತು ಕಸುಬುಗಳನ್ನು ನಾಶ ಮಾಡಿದೆ. ಇದರಿಂದ ಅವರು ಅಪೌಷ್ಟಿಕತೆಯಿಂದ ಬಳಲುವಂತಾಗಿದೆ. ಸರ್ಕಾರ ಕೊಡುವ ಪಡಿತರವೂ ಈ ಸಮಸ್ಯೆಗೆ ಪರಿಹಾರವಾಗಿಲ್ಲ ಎಂದರು.

ಅವಕಾಶ ದೊರಕುತ್ತಿಲ್ಲ:
ಬುಡಕಟ್ಟು ಜನರು ಆಧುನಿಕ ಶಿಕ್ಷಣ ಕಲಿತರೂ ಅವರಿಗೆ ಅವಕಾಶ ಸಿಗುತ್ತಿಲ್ಲ. ಪರಿವರ್ತನೆಗೊಂಡ ಆದಿವಾಸಿಗಳ ಪರವಾದ ನೀತಿ, ಕಾರ್ಯಕ್ರಮ ರೂಪಿಸಬೇಕು. ಮೂಲ ಸ್ವರೂಪದಲ್ಲಿರುವ ಆದಿವಾಸಿಗಳ ಪರವಾದ ಕಾರ್ಯಕ್ರಮಗಳನ್ನೂ ಕಾರ್ಯಗತಗೊಳಿಸಬೇಕು ಎಂದು ಪ್ರೊ. ಮೇತ್ರಿ ಸಲಹೆ ನೀಡಿದರು.


ಬುಡಕಟ್ಟು ಜನರ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಅದಕ್ಕಾಗಿ ಅರಣ್ಯ ವಾಸಿಗಳ ವಲಯ ಗುರುತಿಸಿ ಘೋಷಿಸಬೇಕು. ಅವರಿಗೆ ಪ್ರತ್ಯೇಕ ಯೋಜನೆ ತರಬೇಕು ಎಂದು ಸಲಹೆ ನೀಡಿದರು.

ಎಸ್ಸಿ ಕಲ್ಯಾಣ ಇಲಾಖೆ, ಎಸ್ಟಿ ಕಲ್ಯಾಣ ಇಲಾಖೆ, ಒಬಿಸಿ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ಆದಿವಾಸಿಗಳ ಸೂಕ್ಷ್ಮ ಗುಂಪುಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಧ್ವನಿ ಇಲ್ಲದವರಿಗೆ ಧ್ವನಿಯಾಗಿ, ಅನ್ಯಾಯ-ಅವಕಾಶ ವಂಚಿತರಿಗೆ ಆಶ್ರಯ ಕಲ್ಪಿಸಿಕೊಡುವ ಕೆಲಸವನ್ನು ಸರ್ಕಾರ, ಸಂಸ್ಥೆಗಳಿಂದ ಆಗಬೇಕು ಎಂದು ಸಲಹೆ ನೀಡಿದರು.

ಬಹಳಷ್ಟು ಬುಡಕಟ್ಟು ಸಮುದಾಯಗಳು ಸೌಲಭ್ಯಗಳ ಖಾತೆಯನ್ನೇ ಇನ್ನೂ ತೆರೆದಿಲ್ಲ. ಇದಕ್ಕೆ ಕಾರಣವಾದ ಅಂಶಗಳ ಕುರಿತು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಅಧ್ಯಯನ ಮಾಡಿ ಮೌಲ್ಯಮಾಪನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಅನೇಕ ಅರಣ್ಯವಾಸಿಗಳು ಸಾಲದ ಸುಳಿಗೆ ಸಿಲುಕಿಕೊಂಡಿದ್ದು, ಈ ಕುರಿತು ಅಧ್ಯಯನ ಮಾಡಿ ವರದಿ ನೀಡಬೇಕು. ಈ ಮೂಲಕ ಸಾಲಮುಕ್ತರಾಗಿ ನೆಮ್ಮದಿ ಜೀವನ ನಡೆಸಲು ಕ್ರಮ ವಹಿಸಬೇಕಾಗಿದೆ ಎಂದರು.

ದೇಶಾದ್ಯಂತ ಏಕರೂಪದ ಬುಡಕಟ್ಟು ಸಂಶೋಧನಾ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸರ್ಕಾರ ಚಿಂತನೆ ಮಾಡಿದೆ. ಕೆಲ ರಾಜ್ಯಗಳಲ್ಲಿ ಇದು ಇಲ್ಲ. ಇನ್ನೂ ಕೆಲ ರಾಜ್ಯಗಳಲ್ಲಿರುವ ಈ ಸಂಸ್ಥೆಗೆ ಸಿಬ್ಬಂದಿ, ಮೂಲಸೌಕರ್ಯಗಳಿಲ್ಲ. ಹೀಗೆ ಅನೇಕ ಸಮಸ್ಯೆಗಳು, ಅನೇಕ ರೂಪದಲ್ಲಿ ಇವೆ. ಅದಕ್ಕಾಗಿ ಏಕರೂಪದ ಆಡಳಿತ ಕ್ರಮ ಹೊಂದಿರುವ ಸಂಸ್ಥೆಯನ್ನು ಪ್ರತಿಯೊಂದು ರಾಜ್ಯದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ. ಅದಕ್ಕೆ ಮೇಲುಸ್ತುವಾರಿ ಸಂಸ್ಥೆ ಇರಲಿದೆ ಎಂದು ತಿಳಿಸಿದರು.
ಸಂರಕ್ಷಣೆ ಮಾಡಬೇಕಿದೆ

ಕೇರಳದ ಕಣ್ಣೂರಿನ ಫೋಕ್‌ಲ್ಯಾಂಡ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಜಯರಾಜನ್ ಮಾತನಾಡಿ, ಭಾಷೆ, ಔಷಧ, ನೆಲೆ ಹೀಗೆ ಪ್ರತಿಯೊಂದರಲ್ಲಿ ಸಾಂಪ್ರದಾಯಿಕತೆಯನ್ನು ಬುಡಕಟ್ಟು ಜನರು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಅವರ ಪಾರಂಪರಿಕ ಜ್ಞಾನ, ಕಲೆ, ಚಿತ್ರಕಲೆ, ಸಂಸ್ಕೃತಿಯನ್ನು ಸಂರಕ್ಷಣೆ ಮಾಡಬೇಕಿದೆ ಎಂದರು.

ಬುಡಕಟ್ಟು ಭಾಷೆಗೆ ಸರ್ಕಾರದಿಂದ ಮನ್ನಣೆ ದೊರೆಯುತ್ತಿಲ್ಲ. ಆಯಾ ರಾಜ್ಯ ಭಾಷೆಗಳಿಗೂ ಇವರು ಒಗ್ಗಿಕೊಳ್ಳುತ್ತಿಲ್ಲ. ಬದಲಿಗೆ ಇಂಗ್ಲಿಷ್ ಶಿಕ್ಷಣಕ್ಕೆ ಮಾರುಹೋಗುತ್ತಿದ್ದಾರೆ. ಹೀಗಾದರೆ, ಅರಣ್ಯ ಜನರ ಸಂಸ್ಕೃತಿ ಉಳಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಮೈವಿವಿ ಮಾನವಶಾಸ್ತ್ರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಕೆ.ಭಟ್, ಸಂಸ್ಥೆಯ ನಿರ್ದೇಶಕ ಪ್ರೊ.ಎಲ್.ಶ್ರೀನಿವಾಸ್, ಉಪನಿರ್ದೇಶಕಿ ಬಿ.ಎಸ್.ಪ್ರಭಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net