

ಚಿತ್ರದುರ್ಗ: ಸೇವೆ ಕಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಪೌರ ಕಾರ್ಮಿಕರ ಸಂಘ, ಪೌರ ನೌಕಕರ ಜಿಲ್ಲಾ ಮತ್ತು ತಾಲೂಕು ಶಾಖೆಗಳ ಪದಾಧಿಕಾರಿಗಳು, ಸದಸ್ಯರು ನಡೆಸುತ್ತಿರುವ ಮುಷ್ಕರ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿತು.
ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ನ್ಯಾಯಯುತ ಬೇಡಿಕೆಗೆ ಸ್ಪಂದಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿ ಜಿಲ್ಲಾಡಳಿತದಿಂದ ಮನವಿ ರವಾನಿಸಿದರು.
ಜಿಲ್ಲಾ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಡಿ.ದುರುಗೇಶಪ್ಪ ಮಾತನಾಡಿ, ನಿತ್ಯ ಬೆಳಗ್ಗೆ ನಗರ ಸ್ವಚ್ಛತೆಯಲ್ಲಿ ತೊಡಗುವ ಪೌರ ಕಾರ್ಮಿಕರು ಒಂದು ದಿನ ಕೆಲಸ ಮಾಡದಿದ್ದರೆ, ನಗರದಲ್ಲಿ ಎಂತಹ ಕ್ಲಿಷ್ಠಕರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಚರಂಡಿ, ಶೌಚ ಗುಂಡಿ ಶುಚಿಗೊಳಿಸುವ ವರ್ಗವನ್ನು ಸರ್ಕಾರ ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.
ಒಬ್ಬ ಬಿಲ್ ಕಲೆಕ್ಟರ್ ಬಡ್ತಿ ಪಡೆದು ಮುಖ್ಯಾಧಿಕಾರಿಯಾಗಬಹುದು. ಪೌರ ಕಾರ್ಮಿಕರಿಗೆ ಯಾವ ಬಡ್ತಿಯೂ ಇಲ್ಲ. ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಗುತ್ತಿಗೆ, ಹೊರ ಗುತ್ತಿಗೆ ರದ್ದುಪಡಿಸಿ ನೇರ ನೇಮಕಾತಿ ಮಾಡಿಕೊಳ್ಳಬೇಕು. ಆಪರೇಟರ್‌ಗಳು, ನೀರಗಂಟಿಗಳು, ವಾಹನ ಚಾಲಕರು, ಪೌರ ಕಾರ್ಮಿಕರು ಜೀವನ ಭದ್ರತೆಯಿಲ್ಲದೆ ದುಡಿಯುತ್ತಿದ್ದು, ಸೇವೆ ಕಾಯಂಗೊಳಿಸಿ ಅವರೆಲ್ಲರಿಗೂ ಈ ಮೂಲಕ ಗೌರವ ನೀಡಬೇಕೆಂದು ಒತ್ತಾಯಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸರುಲ್ಲಾ ಮಾತನಾಡಿ, ರಾಜ್ಯ ಸರ್ಕಾರ ನಿರ್ಲಕ್ಷೆ ಮಾಡುವುದು ಬೇಡ. ಆರೋಗ್ಯ ಹದಗೆಡುವಂತ ಕಾಯಕದಲ್ಲಿ ತೊಡಗಿರುವ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ವೇತನ ನಿಗದಿಪಡಿಸಬೇಕು. ಆದಷ್ಟು ಬೇಗ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಸ್ವಚ್ಛತೆಯಲ್ಲಿ ತೊಡಗುವ ಪೌರ ಕಾರ್ಮಿಕರಿಗೂ ಜ್ಯೋತಿ ಮತ್ತು ಆರೋಗ್ಯ ಸಂಜೀವಿನಿ ಯೋಜನೆ ನೀಡಬೇಕು. ಯಾವ ಕಾರಣಕ್ಕೂ ರಾಜ್ಯ ಸರ್ಕಾರ ಪೌರ ಕಾರ್ಮಿಕರ, ನೌಕರರ ಮುಷ್ಕರ ಹಗುರವಾಗಿ ಪರಿಗಣಿಸದೆ, ಸ್ಪಂದಿಸಬೇಕು ಎಂದು ಕೋರಿದರು.
ನಗರಸಭೆ ಅಧ್ಯಕ್ಷೆ ಸುಮಿತಾ, ಸದಸ್ಯರಾದ ದೀಪು, ಮೊಹಮ್ಮದ್ ಜೈಲಾದ್ದೀನ್, ದಾವೂದ್, ಹಿರಿಯೂರು ನಗರಸಭೆ ವ್ಯವಸ್ಥಾಪಕಿ ಮಂಜುಳಮ್ಮ, ಜಿಲ್ಲಾ ಪೌರಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರಾಜಣ್ಣ, ಜಿಲ್ಲಾ ಪೌರ ನೌಕರರ ಅಧ್ಯಕ್ಷ ಎಸ್.ಪಿ.ಲವ, ತಾಲೂಕು ಅಧ್ಯಕ್ಷರಾದ ರೇಣುಕಾ, ನಾಯಕನಹಟ್ಟಿ ಮಂಜುನಾಥ್, ಹಿರಿಯೂರು ದುರ್ಗೇಶ್, ಚಳ್ಳಕೆರೆ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಆರ್.ನವೀನ್, ಪದಾಧಿಕಾರಿಗಳಾದ ರಮೇಶ್, ಪುಟ್ಟಪ್ಪ, ಮೋಕ್ಷದಾಯಿನಿ, ಕರುನಾಡ ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವೀಣಾಗೌರಣ್ಣ ಸೇರಿ ಜಿಲ್ಲೆಯ ನೂರಾರು ನೌಕರರು ಪಾಲ್ಗೊಂಡಿದ್ದರು.