ಬುಕರ್ ಪ್ರಶಸ್ತಿ ಆತ್ಮವಿಮರ್ಶೆಗೆ ಪ್ರೇರಣೆಯಾಗಲಿ; ಬಾನು ಮುಷ್ತಾಕ್‌ಗೆ ನಾಗರಿಕ ಸನ್ಮಾನದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಆಶಯ

11_HSN_01
Published on

ಹಾಸನ: ಯಾವುದೇ ಚಳವಳಿ, ಸಂಘಟನೆಯಲ್ಲಿ ತೊಡಗಿಸಿಕೊಂಡ ಲೇಖಕನನ್ನು ವಿಮರ್ಶಕರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಬಾನು ಮುಷ್ತಾಕ್ ಅವರಿಗೆ ಬಂದಿರುವ ಬುಕರ್ ಪ್ರಶಸ್ತಿ ಕನ್ನಡ ವಿಮರ್ಶೆಯ ಆತ್ಮವಿಮರ್ಶೆಗೆ ಪ್ರೇರಣೆಯಾಗಲಿ ಎಂದು ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೋಮವಾರ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾನು ಮುಷ್ತಾಕ್ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬುಕರ್ ಬಂದ ಮೇಲೆ ಚಳವಳಿಯಿಂದ ಬಂದವರಲ್ಲೂ ಸೃಜಶೀಲ ಬರಹಗಾರರಿದ್ದಾರೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಜಾತಿ, ಮತ, ಪಂಥ ಪ್ರತಿಯೊಂದಕ್ಕೂ ಒಳವಿಮರ್ಶೆ ಇರಬೇಕು. ಒಳ ವಿಮರ್ಶೆಯಿಂದ ಮಾತ್ರ ನಮ್ಮಲ್ಲಿ ಬದಲಾವಣೆ ಸಾಧ್ಯ. ಉನ್ಮಾದ ಕಾಲದಿಂದ ಸಂವಾದದ ಕಾಲ ಬರಲು ಸಾಧ್ಯ ಎಂದರು.

ಪರ ವಿಚಾರವನ್ನು ಪರ ಧರ್ಮವನ್ನು ಸಹಿಸುವ ಗುಣ ನಮ್ಮಲ್ಲಿ ಬರಲಿ ಎಂದು 850 ವರ್ಷಗಳ ಹಿಂದೆ ಕವಿರಾಜಮಾರ್ಗ ಕೃತಿಯಲ್ಲಿ ಹೇಳಲಾಗಿದೆ. ಆದರೆ, ಇಂದು ನಮ್ಮಲ್ಲಿ ಸಿನಿಕತನ ಹೆಚ್ಚಿದೆ. ಅದೊಂದು ಆತ್ಮರತಿಯಾಗಿದೆ. ನಮ್ಮಲ್ಲಿ ಭಾಷೆ, ಧರ್ಮ, ಕ್ರೀಡೆಯ ಸಮೂಹ ಸನ್ನಿ ಸೃಷ್ಟಿಯಾಗಿದೆ. ಭಾವೋದ್ವೇಗ ಸಂವಾದವನ್ನು ನುಂಗಿ ಹಾಕುತ್ತಿದೆ. ಯಾವುದೇ ಸನ್ಮಾನವು ಸಂತೋಷ ಅನುಭವವಾಗಿರಬೇಕು. ಆದರೆ ಸಂತೋಷವನ್ನು ಹುಡುಕಿಕೊಂಡು ಹೋಗುವಂತಹ ಸ್ಥಿತಿ ಇಂದು ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಲ್ಮಿಡಿಯಿಂದ ಬುಕರ್‌ವರೆಗೆ

ಹಾಸನ ಜಿಲ್ಲೆ ಎಂದರೆ ಕನ್ನಡದ ಪ್ರಥಮ ಶಾಸನ ಹಲ್ಮಿಡಿಯಿಂದ ಇಂದು ಬುಕರ್ ಪ್ರಶಸ್ತಿವರೆಗೂ ಕೊಡುಗೆ ನೀಡಿರುವ ವಿಶಿಷ್ಟ ಸಾಂಸ್ಕೃತಿಕ ಜಿಲ್ಲೆಯಾಗಿದೆ. ಇಂದು ನಾನು ತುಂಬಾ ಸಂತೋಷದಿಂದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರನ್ನು ಅಭಿನಂದಿಸುತ್ತಿದ್ದೇನೆ. 1973ರಲ್ಲಿ ಬಂಡಾಯ ಸಾಹಿತ್ಯ ಕಟ್ಟಿದಾಗ ಅದೇ ಸಾಹಿತ್ಯದಲ್ಲಿ ಬೆಳೆದ ಬಾನು ಅವರು ಬಂಡಾಯ ಸಾಹಿತ್ಯದಿಂದ ಪ್ರೇರಣೆಗೊಂಡು ಬೆಳೆದಿದ್ದನ್ನು ಇಂದು ಪ್ರಶಸ್ತಿ ಸ್ವೀಕರಿಸಿದಾಗ ಎಲ್ಲ ಸಂದರ್ಶನಗಳಲ್ಲೂ ಸ್ಮರಿಸಿಕೊಂಡಿದ್ದಾರೆ. ಪ್ರತಿ ಸಂದರ್ಶನದಲ್ಲಿ ಸೈದ್ಧಾಂತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದು ಜನಪರ, ಸಂಘಟನೆ, ಚಳವಳಿ ಸಂದಿರುವ ಗೌರವ ಎಂದರು.

ಇಲ್ಲಿ ಇಬ್ಬರೂ ಲೇಖಕಿಯರು ಮುಖ್ಯ. ಮೂಲ ಲೇಖಕರು ಬಹುಮುಖ್ಯ. ಎದೆಯ ಹಣತೆ ಕೃತಿ ಕನ್ನಡಕ್ಕೆ ಹೊಸ ಆಯಾಮ ಒದಗಿಸಿಕೊಟ್ಟಿದ್ದು ಬಹಳ ವಿಶೇಷ. ಇದನ್ನು ಭಾಸ್ತಿ ಜಗತ್ತಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಇಬ್ಬರನ್ನು ಅಭಿನಂದಿಸಲು ಉದ್ದೇಶಿಸಿದ್ದು ಜನಪರ ಮಾದರಿಯಾಗಿದೆ. ಬಾನು ಅವರು ಬದುಕಿನ ವಾಸ್ತವ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಅನುಭವ ದ್ರವ್ಯವನ್ನು ಕೊಟ್ಟಿದ್ದಾರೆ. ಅದೇ ಕನ್ನಡದ ಸೊಗಡನ್ನು ದೀಪಾ ಭಾಸ್ತಿಯವರು ಮೂಲ ಲೇಖಕಿಯ ಆಶಯ ಅರಿತು ಭಾಷಾಂತರ ಅಷ್ಟೇ ಅಲ್ಲದೇ ಭಾವಾಂತರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು.

ಮುಸ್ಲಿಂ ಸಮುದಾಯದ ಸಂಕಟಗಳನ್ನು ತೆರೆದಿಟ್ಟಿದ್ದಾರೆ. ಅಲ್ಲಿನ ಆಚರಣೆ, ಪದ್ಧತಿ ತೆರೆದಿಟ್ಟರೂ ಅದು ಅಂತಿಮವಾಗಿ ಎಲ್ಲ ಸಮುದಾಯದ ಮಹಿಳೆಯರ ಸಂಕಟಗಳನ್ನು ಅನಾವರಣಗೊಳಿಸಿದ್ದಾರೆ. ಪರ ವಿಚಾರವನ್ನು, ಪರ ಧರ್ಮವನ್ನು ಸಹಿಸುವ ಗುಣ ನಮ್ಮಲ್ಲಿ ಬರಲಿ. ಬಾನು ಅವರಿಗೆ ಲಂಡನ್‌ನಲ್ಲಿ ಪತ್ರಕರ್ತರೊಬ್ಬರು ‘ಭಾರತದಲ್ಲಿ ಮುಸ್ಲಿಮರು ಬದುಕುವುದು ಕಷ್ಟವಾಗಿದೆ, ನಿಮಗೆ ಬದಕುಲು ಬೇರೆ ದೇಶದ ಅವಶ್ಯಕತೆ ಇದೆಯಾ? ಎಂದು ಪ್ರಶ್ನೆ ಕೇಳಿದಾಗ ಎಲ್ಲ ದೇಶದಲ್ಲೂ ಸಮಸ್ಯೆಗಳಿವೆ. ನನ್ನ ದೇಶದ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಉತ್ತರಿಸುವ ಮೂಲಕ ದೇಶಾಭಿಮಾನವನ್ನು ಮೆರೆದಿದ್ದಾರೆ.

ಅಭಿನಂದನಾ ನುಡಿಗಳನ್ನಾಡಿದ ಸಾಹಿತಿ ಎಚ್.ಎಸ್.ಅನುಪಮಾ ಅವರು, ಕಳೆದ ವರ್ಷ ಜಿಲ್ಲೆಗೆ ಕವಿದಿದ್ದ ಕರಾಳ ಕತ್ತಲಿಗೆ ಬಾನು ಮುಷ್ತಾಖ್ ಅವರು ಹಚ್ಚಿದ ಎದೆಯ ಹಣತೆಯಿಂದ ಕತ್ತಲು ಕರಗಿ ಜಿಲ್ಲೆ ಪ್ರಕಾಶಿಸುತ್ತಿದೆ. ಬಾನು ಮುಷ್ತಾಕ್ ನಿರ್ವಾತದಿಂದ ಬಂದವರಲ್ಲ, ಕುಟುಂಬ, ಸಮುದಾಯ, ಒತ್ತಡ, ದುಗುಡು, ಚಳವಳಿ, ಪ್ರಕೃತಿಯಿಂದ ಬಂದವರು. ಇಂದು ಅಕ್ಷರಕ್ಕೆ ಸಿಕ್ಕ ಬಹುದೊಡ್ಡ ಗೌರವವನ್ನು ಸಂಭ್ರಮಿಸುವ ಸುವರ್ಣ ಕ್ಷಣ ನಮ್ಮದಾಗಿದೆ. ಒಳ್ಳೆಯದು ಎಲ್ಲವನ್ನೂ ಸ್ವೀಕರಿಸುವ ಗುಣ ಎಲ್ಲರಲ್ಲೂ ಬೆಳೆಯಬೇಕು ಎಂಬುದನ್ನು ನಮ್ಮ ಉಪನಿಷತ್‌ಗಳು ಹೇಳಿವೆ. ಬುಕರ್ ಪ್ರಶಸ್ತಿಯ ಆಶಯ ಮತ್ತು ಸಂಕೇತ ಕೂಡ ಅದೆ. ಉರ್ದು ಮಾತೃಭಾಷೆಯ ಲೇಖಕಿ ಕನ್ನಡದಲ್ಲಿ ಬರೆದು ಅದು ಇಂಗ್ಲಿಷ್‌ಗೆ ಅನುವಾದಗೊಂಡು ಗಡಿಯನ್ನು ದಾಟಿ ಈ ಗೌರವ ಭಾಜನವಾಗಿರುವುದೇ ಬಾನು ಮುಷ್ತಾಕ್ ಬರವಣಿಗೆಯ ಶಕ್ತಿ ಎಂದರು.

ಇಂದಿನ ಕಾಲ ತುಂಬಾ ಸಂಕೀರ್ಣವಾಗಿದೆ. ಒಂದು ಭಾರತದಲ್ಲಿ ಹಲವು ಭಾರತ, ಒಂದು ಹಾಸನದಲ್ಲಿ ಹಲವು ಹಾಸನಗಳು, ಬಹು ಸಂಸ್ಕೃತಿಗಳ ಭಾರತ. ಇಂದು ಸಮಾಜದಲ್ಲಿ ಅಂಚಿಗೆ ಸರಿಸಲ್ಪಟ್ಟ ಹಲವು ಸಮುದಾಯಗಳಿವೆ. ಇದು ಇಲ್ಲಿ ಅಂತ ಮಾತ್ರವಲ್ಲ. ಇಡೀ ವಿಶ್ವದಲ್ಲಿಯೇ ಒಂದು ಸಮುದಾಯದ ವಿರುದ್ಧವಾಗಿ ಸುಳ್ಳು ಸುದ್ದಿ ಹಬ್ಬಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಮಹಿಳೆಯರು ಬಿಕ್ಕಟ್ಟಿಗೆ ಹೆದರಿದರೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಎಂತಹ ವಿಷಮ ಕಾಲದಲ್ಲೂ ಸುಮ್ಮನಾಗದೆ ಬೆಳೆದ ಜೀವ ಬಾನು ಮುಷ್ತಾಕ್. ದೇಹಕ್ಕೆ ಆದ ಗಾಯ ಮಾಯುತ್ತದೆ. ಆದರೆ ಕಣ್ಣಿಗೆ ಆದ ಗಾಯ ಮಾಯುವುದು ಹೇಗೆ? ಇದು ತಲೆಮಾರಿನಿಂದ ತಲೆಮಾರಿಗೆ ಬೆಳೆದು ಬರುತ್ತದೆ. ಇಂತಹ ನೋವು, ಸಂಕಟಗಳನ್ನು ಕಣ್ಣಾರೆ ಕಂಡ ಬಾನು ಮುಷ್ತಾಕ್ ತಮ್ಮ ತುಮುಲಗಳನ್ನು ಕತೆಗಳ ಮೂಲಕ ಹೊರಹಾಕಿದರು. ಅಲ್ಲಿ ಮಹಿಳೆಯರ ನೋವುಗಳಿವೆ, ತಾವು ಕಂಡುಂಡ ಕಷ್ಟಗಳ ಸರಮಾಲೆಯ ಅನಾವರಣ ಮಾಡಿದ್ದಾರೆ. ಅಮಾನವೀಯ ಸ್ಥಿತಿಯಲ್ಲಿ ಇದ್ದವರು ಮಾತ್ರ ಕತೆ ಹೇಳುತ್ತಾರೆ ಹೊರತು ವಿರಾಮದಲ್ಲಿ ಇದ್ದವರು ಹೇಳುವುದಿಲ್ಲ. ತನ್ನ ಅನುಭವವನ್ನು ಅಭಿವ್ಯಕ್ತಪಡಿಸಲು, ನಮ್ಮೊಳಗಿನ ಬೆಂಕಿಯನ್ನು ಬರೆದು ದಹಿಸಿಕೊಳ್ಳುಲು, ಒತ್ತಡ, ಆಕ್ರೋಶ ಹೊರಹಾಕಲು ಹಾಗೂ ಬದುಕಲು ಬರೆಯಬೇಕಾಗಿದೆ. ಇದನ್ನೇ ಬಾನು ಮುಷ್ತಾಕ್ ಅವರು ಕತೆಗಳ ರೂಪದಲ್ಲಿ ಹೊರಹಾಕಿದ್ದಾರೆ ಎಂದು ಹೇಳಿದರು.

ಬಾನು ಮುಷ್ತಾಕ್ ಅವರ ಹಸೀನಾ ಕಥಾ ಸಂಕಲನದಲ್ಲಿ 47 ಕತೆಗಳಿವೆ. ಅಷ್ಟು ಕತೆಗಳನ್ನು ಕಾದಂಬರಿಗಳನ್ನಾಗಿ ಬರೆಯಬಹುದಿತ್ತು. ಅಷ್ಟೊಂದು ಗಂಭೀರ ವಿಷಯಗಳನ್ನು ಅವರು ಕತೆಯಲ್ಲಿ ಹುದುಗಿಸಿ ಇಟ್ಟಿದ್ದಾರೆ. ಅಕಾಡೆಮಿಕ್ ವಲಯ ಬಾನು ಅವರ ಕತೆಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಚಳವಳಿಯಲ್ಲಿ ನಮ್ಮಂಥ ಲೇಖಕರನ್ನು ಗುರುತಿಸುವಿಕೆ ಆಗುತ್ತಿಲ್ಲ. ಬುಕರ್ ಮುಖಾಂತರ ಈ ಪ್ರವೃತ್ತಿ ಬದಲಾಗಲಿ. ಶಾಲೆ ಪಠ್ಯಗಳಲ್ಲಿ ಬಾನು ಮುಷ್ತಾಕ್ ಅವರ ಕತೆಗಳನ್ನು ಸೇರಿಸಲಿ. ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಕತೆಗಳ ಮೂಲಕ ಹೆಣ್ಣಿನ ನೋವುಗಳು ಅರ್ಥವಾಗಲಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಎಸ್. ಸ್ವರೂಪ್, ಮೇಯರ್ ಎಂ.ಚಂದ್ರೇಗೌಡ, ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಎಸ್‌ಪಿ ಮೊಹಮ್ಮದ್ ಸುಜಿತಾ, ಜಿಪಂ ಸಿಇಒ ಡಾ.ಪೂರ್ಣಿಮಾ, ದಲಿತ ಮುಖಂಡ ನಾರಾಯಣದಾಸ್, ಧರ್ಮೇಶ್ ಇತರರು ಉಪಸ್ಥಿತರಿದ್ದರು.

ಪುಸ್ತಕ ಖರೀದಿಗೆ ಮುಗಿಬಿದ್ದ ಜನರು

ಸನ್ಮಾನ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪಡೆದ ಎದೆಯ ಹಣತೆ ಪುಸ್ತಕವನ್ನು ಖರೀದಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಕಲಾಭವನದ ಹೊರಭಾಗದಲ್ಲಿ ಪುಸ್ತಕ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಯಿತು. ಇಲ್ಲಿ ಬಾನು ಮುಷ್ತಾಕ್ ಅವರ ಮೂಲ ಕೃತಿ ಎದೆಯ ಹಣತೆ ಹಾಗೂ ಇದರ ಇಂಗ್ಲಿಷ್ ಅನುವಾದವಾದ ಹಾರ್ಟ್ ಲ್ಯಾಂಪ್‌ಗಳನ್ನು ಕೃತಿಗಳನ್ನು ಜನರು ಅತ್ಯುತ್ಸಾಹದಿಂದ ಖರೀದಿ ಮಾಡಿದರು.

ಅದ್ದೂರಿ ಮೆರವಣಿಗೆ

ಅಂತರಾಷ್ಟ್ರೀಯ ಬುಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರಿಗೆ ನಾಗರಿಕರಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದ ಅಂಗವಾಗಿ ಸೋಮವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅದ್ದೂರಿ ಮೆರವಣಿಗೆಗೆ ಶಾಸಕ ಎಚ್.ಪಿ. ಸ್ವರೂಪ್, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ, ಮಹಾನಗರ ಪಾಲಿಕೆ ಅಧ್ಯಕ್ಷ ಎಂ. ಚಂದ್ರೇಗೌಡ ಇತರರು ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಾಂಸ್ಕೃತಿಕ ಕಲಾತಂಡದೊಡನೆ ಭವ್ಯ ಮೆರವಣಿಗೆ ಸಾಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net