ಬೀಳುವ ಹಂತದಲ್ಲಿರುವ ಮರ ತೆರವಿಗೆ ಆಗ್ರಹ

23Ku
Published on

ಕುಶಾಲನಗರ: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಸುಂದರನಗರದಲ್ಲಿ ಮರವೊಂದು ಬೀಳುವ ಹಂತದಲ್ಲಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷೃ ವಹಿಸಿದ್ದಾರೆ ಎಂದು ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್ ಆರೋಪಿಸಿದ್ದಾರೆ.

ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಸ್ಥಳೀಯರಾದ ಅರುಣ್ ಮರ ತೆರವಿಗೆ ಆಗ್ರಹಿಸಿ ಹಲವಾರು ಬಾರಿ ಮನವಿ ನೀಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಬೀಳುವ ಹಂತದಲ್ಲಿರುವ ಮರವನ್ನು ಕೂಡಲೇ ತೆರವುಗೊಳಿಸಿ, ಅನಾಹುತವನ್ನು ತಪ್ಪಿಸಬೇಕಾಗಿದೆ. ಏನಾದರೂ ಅನಾಹುತ ಸಂಭವಿಸಿದರೆ, ಇದರ ಹೊಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳೇ ಹೊರಬೇಕಾಗುತ್ತದೆ ಎಂದರು.

ಈ ಬಗ್ಗೆ ಪಂಚಾಯಿತಿಯಿಂದಲೂ ಹಲವು ಬಾರಿ ಅರಣ್ಯ ಇಲಾಖೆಗೆ ಪತ್ರ ವ್ಯವಹಾರ ನಡೆಸಲಾಗಿದೆ. ಆದರೂ ದಪ್ಪ ಚರ್ಮದ ಅಧಿಕಾರಿಗಳು ಗಮನಹರಿಸುತ್ತಿಲ್ಲ. ತಾವೂ ವಲಯ ಅರಣ್ಯಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮರ ತೆರವುಗೊಳಿಸುವಂತೆ ಮನವಿ ಮಾಡಿದ್ದು, ಮತ್ತೆ ನಿರ್ಲಕ್ಷ್ಯ ತೋರಿದ್ದಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net