

ಚಿತ್ರದುರ್ಗ: ರಾಜಬೀದಿ ದೊಡ್ಡಪೇಟೆ ಕಂಬಳಿ ಬೀದಿಯಲ್ಲಿರುವ ಬೀರಗಲ್ಲೇಶ್ವರ ಸ್ವಾಮಿ ದೇಗುಲದಲ್ಲಿ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮದ ಅಂಗವಾಗಿ ಭಾನುವಾರ ಸ್ವಾಮಿಗೆ ಮಹಾರುದ್ರಾಭಿಷೇಕ ಸೇವೆ ನೆರವೇರಿತು.
ಮುಂಜಾನೆಯಿಂದಲೇ ಸ್ವಾಮಿಯ ಮೂರ್ತಿಗೆ ಜಲಾಭಿಷೇಕ, ಬಿಲ್ವಾರ್ಚನೆ ಸೇರಿ ಇತರೆ ಪೂಜೆಗಳು ಜರುಗಿದವು. ನಂತರ ಶಾಸ್ತ್ರೋಕ್ತವಾಗಿ ರುದ್ರಾಭಿಷೇಕ ನಡೆಯಿತು.
ಪೂಜಾ ಕಾರ್ಯಕ್ರಮದ ಅಂಗವಾಗಿ ಬೀರಗಲ್ಲೇಶ್ವರ, ಪಾರ್ವತಿ ದೇವಿ, ಗಣಪತಿ, ವೀರಭದ್ರೇಶ್ವರ, ಬಸವಣ್ಣ, ಆಂಜನೇಯ ಸೇರಿ ದೇವರ ಮೂರ್ತಿಗಳಿಗೆ ಸೇವಂತಿ ಸೇರಿ ಇತರೆ ಪುಷ್ಪಗಳಿಂದ ಅರ್ಚಕರು ಅಲಂಕರಿಸಿದ್ದರು. ನೂರಾರು ಭಕ್ತರು ಭೇಟಿ ನೀಡಿ ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥಿಸಿದರು. ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.
ಸೊಲ್ಲಾಪುರ ಗ್ರಾಮದ ಚಂದ್ರಣ್ಣ ಮತ್ತು ತಂಡದಿಂದ ಶನಿವಾರ ಶನಿದೇವರ ಪುರಾಣ ಪ್ರವಚನ ನಡೆಯಿತು. ಭಕ್ತರ ಸಹಕಾರದಿಂದ ಎರಡು ದಿನದ ಪೂಜಾ ಕಾರ್ಯಕ್ರಮ ಸಂಪನ್ನಗೊಂಡಿತು ಎಂದು ಬೀರಗಲ್ಲೇಶ್ವರ ಸ್ವಾಮಿ ಸೇವಾ ಟ್ರಸ್ಟ್ ತಿಳಿಸಿದೆ.