ಬೀರಗಲ್ಲೇಶ್ವರ ಸ್ವಾಮಿ ಕಾರ್ತಿಕೋತ್ಸವ ಸಂಪನ್ನ

Pallakki
Published on

ಚಿತ್ರದುರ್ಗ: ರಾಜಬೀದಿ ದೊಡ್ಡಪೇಟೆ ಕಂಬಳಿ ಬೀದಿಯಲ್ಲಿರುವ ಬೀರಗಲ್ಲೇಶ್ವರ ಸ್ವಾಮಿ ದೇಗುಲದಲ್ಲಿ ಕಾರ್ತಿಕ ಮಹೋತ್ಸವದ ಪೂಜಾ ಕಾರ್ಯಕ್ರಮವೂ ಭಾನುವಾರ ಸ್ವಾಮಿಗೆ ಮಹಾರುದ್ರಾಭಿಷೇಕ ಸೇವೆಯೊಂದಿಗೆ ವಿಶೇಷವಾಗಿ ನೆರವೇರಿತು.

ಮುಂಜಾನೆಯಿಂದಲೇ ಸ್ವಾಮಿಯ ಮೂರ್ತಿಗೆ ಜಲಾಭಿಷೇಕ, ಬಿಲ್ವಾರ್ಚನೆ ಸೇರಿ ಇತರೆ ಪೂಜೆಗಳು ಜರುಗಿದವು. ನಂತರ ಶಾಸ್ತ್ರೋಕ್ತವಾಗಿ ರುದ್ರಾಭಿಷೇಕ ನಡೆಯಿತು.

ಕಡೇ ಕಾರ್ತಿಕೋತ್ಸವದ ಅಂಗವಾಗಿ ದೇಗುಲದಲ್ಲಿನ ಬೀರಗಲ್ಲೇಶ್ವರ, ಪಾರ್ವತಿ ದೇವಿ, ಗಣಪತಿ, ವೀರಭದ್ರೇಶ್ವರ, ನಂದಿ, ಆಂಜನೇಯ ಒಳಗೊಂಡು ದೇವರ ಮೂರ್ತಿಗಳಿಗೆ ಸೇವಂತಿ ಸೇರಿ ಇತರೆ ಪುಷ್ಪಗಳಿಂದ ಅರ್ಚಕರು ಅಲಂಕರಿಸಿದ್ದರು.

ನೂತನ ಪಲ್ಲಕ್ಕಿಯನ್ನು ಪುಷ್ಪಗಳಿಂದ ಸಿಂಗರಿಸಿ, ಸ್ವಾಮಿ ಪ್ರತಿಷ್ಠಾಪಿಸಿದ ನಂತರ ಕಾಳಮ್ಮ ದೇಗುಲಕ್ಕೆ ಕರೆತರಲಾಯಿತು. ಅಲ್ಲಿಂದ ಛತ್ರ-ಚಾಮರ, ಮಂಗಳವಾದ್ಯ ಸಮೇತ ಫಿಲ್ಟರ್ ಹೌಸ್ ರಸ್ತೆ ಮಾರ್ಗವಾಗಿ ಸಂಚರಿಸಿ ದೇಗುಲ ತಲುಪಿತು. ಭಕ್ತರಿಂದ ಜಯಘೋಷ ಮೊಳಗಿದವು.

ಸಂಜೆ ದೀಪೋತ್ಸವದಲ್ಲಿ ಕುಟುಂಬ ಸಮೇತ ಪಾಲ್ಗೊಂಡ ನೂರಾರು ಭಕ್ತರು ದೇಗುಲ ಮುಂಭಾಗ ಶ್ರದ್ಧಾ-ಭಕ್ತಿಯಿಂದ ದೀಪಗಳನ್ನು ಹಚ್ಚಿ ಭಕ್ತಿ ಸಮರ್ಪಿಸಿದರು. ನಂತರ ಸ್ವಾಮಿಯ ದರ್ಶನ ಪಡೆದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.

ಭಕ್ತರ ಸಹಕಾರದಿಂದ ಪ್ರಸಕ್ತ ಸಾಲಿನ ಕಾರ್ತಿಕೋತ್ಸವ ಸಂಪನ್ನಗೊಂಡಿತು ಎಂದು ಬೀರಗಲ್ಲೇಶ್ವರ ಸ್ವಾಮಿ ಸೇವಾ ಟ್ರಸ್ಟ್ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net