ಬೀದಿಯಲ್ಲಿ ವೃದ್ಧೆಯ ಬದುಕು

06 yelandur 01
Published on

ಯಳಂದೂರು: ಯಾರದೋ ಮನೆಯ ಹಿತ್ತಲಿನಲ್ಲಿ ಸೀರೆ ಕಟ್ಟಿಕೊಂಡು, ಕಾಂಕ್ರಿಟ್ ರಸ್ತೆಯನ್ನೇ ಹಾಸಿಗೆ ಮಾಡಿಕೊಂಡು, ಬಿಸಿಲು, ಮಳೆ, ಚಳಿ,ಗಾಳಿಯಲ್ಲೇ 6 ತಿಂಗಳಿಂದಲೂ ವೃದ್ಧೆ ಬದುಕು ಸಾಗಿಸುತ್ತಿದ್ದು ಅಧಿಕಾರಿಗಳು ಕಣ್ಣಿದ್ದು ಕುರುಡಾಗಿದ್ದಾರೆ.


ಪಟ್ಟಣದ ಸೊಪ್ಪಿನಕೇರಿಯ ನಿವಾಸಿ 65 ವರ್ಷದ ಮಹಾದೇವಮ್ಮ ಇದೇ ಬೀದಿಯ ಕೊನೆಯಲ್ಲಿರುವ ಸುವರ್ಣಾವತಿ ನದಿ ದಡದಲ್ಲಿ ರಸ್ತೆಯ ಮೇಲೆ ಬದುಕು ಸವೆಸುತ್ತಿರುವ ದೃಶ್ಯ ಕಣ್ಣೀರು ತರಿಸುತ್ತದೆ.


ಮೋಸ ಮಾಡಿದ ಸಂಬಂಧಿಕರು: ಈ ಹಿಂದೆ ಇವರಿಗೆ ಪಟ್ಟಣದ ಕುಂಬಾರಗುಂಡಿಯಲ್ಲಿ ಸರ್ಕಾರದಿಂದ ಖಾಲಿ ನಿವೇಶನ ಮಂಜೂರಾಗಿತ್ತು. ಆದರೆ ಇವರ ಸಂಬಂಧಿಕರು ಓದು ಬರಹ ತಿಳಿಯದ ಮಹಾದೇವಮ್ಮನಿಗೆ ಮನೆ ಕಟ್ಟಿ ನೀನು ಇರುವ ತನಕ ಇಲ್ಲೇ ಇರು ಎಂದು ಆಸೆ ಹುಟ್ಟಿಸಿ, ಆಕೆಗೆ ಗೊತ್ತಿಲ್ಲದಂತೆ ಸಹಿ ಮಾಡಿಸಿಕೊಂಡು ಆ ಸ್ಥಳವನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಂಡಿದ್ದಾರೆ. ನಂತರ ಇವರಿಗೆ ಮನೆಯನ್ನೂ ನೀಡದೆ ಜಾಗವನ್ನು ನೀಡದೆ ಹೊರದಬ್ಬಿದ್ದಾರೆ.


ಬೋರ್‌ವೆಲ್ ಕೊರೆಸಲು 16 ಸಾವಿರ ರೂ .ನೀಡಿದ್ದ ಮಹಾದೇವಮ್ಮ: ಮಹಾದೇವಮ್ಮ ಮದುವೆಯಾಗಿಲ್ಲ. ತಮ್ಮ ಬದುಕು ಕಟ್ಟಿಕೊಳ್ಳಲು ಹೂವು ಮಾರುವ ಕಾಯಕವನ್ನು ಮಾಡುತ್ತಿದ್ದರು. ಅಪಾರ ದೈವಭಕ್ತೆಯಾಗಿದ್ದ ಈಕೆ ಹೂವು ಕಟ್ಟಿ ಮಾರಿ ಇದರಿಂದ ಬಂದ ಹಣದಲ್ಲಿ ಅಲ್ಪ ಹಣವನ್ನು ಉಳಿಸುತ್ತಿದ್ದರು. ತಾಲೂಕಿನ ಮದ್ದೂರು ಗ್ರಾಮದಲ್ಲಿರುವ ಮದ್ದೂರಮ್ಮ ದೇಗುಲದ ಆವರಣದಲ್ಲಿ ಬರುವ ಭಕ್ತರಿಗೆ ನೀರಿನ ಸಮಸ್ಯೆ ಇದೆ ಎಂದು ಅರಿತ ಅವರು ತಮ್ಮ ಉಳಿತಾಯದ 16 ಸಾವಿರ ರೂ. ಹಣವನ್ನು ನೀಡಿ ಬೋರ್‌ವೆಲ್ ಕೊರೆಯಿಸಿಕೊಟ್ಟಿದ್ದಾರೆ. ಅಲ್ಲದೆ ಕೆಲವರಿಗೆ ತಮ್ಮ ಕೈಲಾದಷ್ಟು ಹಣವನ್ನು ದಾನವಾಗಿಯೂ ನೀಡುತ್ತಾ ಬಂದಿದ್ದಾರೆ. ಆದರೆ ಇತ್ತೀಚೆಗೆ ಅವರು ಜಾರಿ ಬಿದ್ದು ನಡುವಿನ ಮೂಳೆ ಮುರಿದಿದೆ. ಈಗ ಅವರಿಗೆ ಚಿಕಿತ್ಸೆಗೆ ಹಣವಿಲ್ಲ. ಎದ್ದು ಓಡಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.

ಅಕ್ಕಪಕ್ಕದಲ್ಲಿರುವ ಮನೆಯವರು ಕೊಡುವ ಊಟವನ್ನೇ ಸೇವಿಸುತ್ತಾರೆ. ಗಿಡಗಳಿಗೆ ಹರಿದ ಸೀರೆಯ ನೆರಿಕೆಗಳನ್ನು ಕಟ್ಟಿಕೊಂಡು ರಸ್ತೆ ಮೇಲೆ, ಮಲಗುತ್ತಾರೆ. ಮಳೆ ಬಂದರೆ ಇವರ ಸ್ಥಿತಿ ಹೇಳತೀರದು. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ವಹಿಸಿ ಅವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಮಹಾದೇವಮ್ಮಗೆ ಆಸ್ತಿ ವಿಷಯದಲ್ಲಿ ಕುಟುಂಬದವರಿಂದ ಮೋಸವಾಗಿದೆ. ಅವರನ್ನು ಬೀದಿಗೆ ದಬ್ಬಲಾಗಿದೆ. ಈಗ ಇವರಿಗೆ ವಯಸ್ಸಾಗಿದ್ದು ವಸತಿ ಕಲ್ಪಿಸುವ ಅವಶ್ಯಕತೆ ಇದೆ. ಇದರೊಂದಿಗೆ ಅವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಜವಾಬ್ದಾರಿಯನ್ನು ಸಂಬಂಧಪಟ್ಟವರು ಹೊರಬೇಕಿದೆ.
ವೈ.ಜಿ. ರಂಗನಾಥ, ಪಪಂ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net