ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ

31SND-01
Published on

ಸಿಂಧನೂರು: ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿದ್ದು, ನಿರಾಶ್ರಿತರಾಗಿರುವ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಬೀದಿ ಬದಿ ವ್ಯಾಪಾರಸ್ಥರ ಹೋರಾಟ ಸಮಿತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ, ತಹಸಿಲ್ ಕಚೇರಿ ಮುಂದೆ ಉಪವಾಸ ನಿರಶನ ಆರಂಭಿಸಲಾಯಿತು.

ಬೀದಿಬದಿ ವ್ಯಾಪಾರಿಗಳಿಗೆ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಜಾಗ ಮತ್ತು ನಗರ ಪೊಲೀಸ್ ಠಾಣೆಯ ಬಲಭಾಗದ ಜಾಗದಲ್ಲಿ ತರಕಾರಿ, ಹೂ, ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಸರ್ಕಾರಿ ಹಣ್ಣಿನ ತೋಟ, ಸುಕೋ ಬ್ಯಾಂಕ್ ಹಿಂದೆ ಇರುವ ಸಹಕಾರ ಇಲಾಖೆಗೆ ಸೇರಿದ ಜಾಗ, ಜನತಾ ಬಜಾರ್ ಹಿಂದೆ ಇರುವ ಆಹಾರ ಇಲಾಖೆಯ ಜಾಗ, ಹಳೆ ಬಸ್ ನಿಲ್ದಾಣ ಆವರಣ, ಹಳೆಯ ಪೈಪ್ ಕಂಪನಿ ಮುಂದಿನ ತುಂಗಭದ್ರಾ ಉಪಕಾಲುವೆ ಬಳಿಯ ಜಾಗ, ಎಪಿಎಂಸಿ ಮುಂದಿನ ಜಾಗದಲ್ಲಿ ಆಟೋಮೊಬೈಲ್ಸ್, ವರ್ಕ್‌ಶಾಪ್, ಟೈಲರಿಂಗ್, ಬಟ್ಟೆ ಅಂಗಡಿ ಇತರ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಲಾಯಿತು.

ನಗರದಲ್ಲಿ ಖಾಲಿ ಮಾಡಿರುವ ಸರ್ಕಾರಿ, ಸಹಕಾರ, ಆಹಾರ ಇಲಾಖೆ, ಕಂದಾಯ ಇಲಾಖೆ, ಪಿಡಬ್ಲ್ಯುಡಿ, ನಗರಸಭೆ ಜಾಗವನ್ನು ಮತ್ತೆ ಸರ್ವೇ ಮಾಡಿ ಹದ್ದುಬಸ್ತು ಮಾಡಿ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕೆಂದು ಒತ್ತಾಯಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net