ಬೀದಿನಾಯಿಗಳ ಮಾರಣಹೋಮ

7 Dwd 2
Published on

ಧಾರವಾಡ: ಬೀದಿನಾಯಿಗಳಿಗೆ ದುರುಳರು ವಿಷವುಣಿಸಿ ಮಾರಣಹೋಮಗೈದ ಹೃದಯ ವಿದ್ರಾವಕ ಘಟನೆ ನಗರದ ನಾರಾಯಣಪುರ ಬಡಾವಣೆಯಲ್ಲಿ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

6 ಬೀದಿ ನಾಯಿಗಳು ಅಲ್ಲಲ್ಲಿ ಸತ್ತುಬಿದ್ದಿದ್ದು, ಅದಕ್ಕಿಂತ ಹೆಚ್ಚು ನಾಯಿಗಳು ತೀವ್ರ ಅಸ್ವಸ್ಥಗೊಂಡು ವಿಲವಿಲ ಒದ್ದಾಡುತ್ತಿದ್ದ ದೃಶ್ಯ ಮನ ಕಲಕುವಂತೆ ಇತ್ತು. ನಾಯಿಗೆ ಹಾಕಿದ್ದ ವಿಷಾಹಾರ ತಿಂದು ಕೆಲವು ಕಾಗೆಗಳೂ ಮೃತಪಟ್ಟಿವೆ. ಯಾರೋ ಕಿಡಿಗೇಡಿಗಳು ಚಿಕನ್​ನಲ್ಲಿ ವಿಷ ಹಾಕಿರುವುದು ಮೇಲ್ನೋಟಕ್ಕೆ ಖಾತ್ರಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ವನ್ಯಜೀವಿ ರಕ್ಷಕ ಸೋಮಶೇಖರ ಚನ್ನಶೆಟ್ಟಿ ಹಾಗೂ ಇತರರು ಅಸ್ವಸ್ಥಗೊಂಡ ನಾಯಿಗಳಿಗೆ ಬೀದಿ ಮಧ್ಯೆಯೇ ಚಿಕಿತ್ಸೆ ನೀಡಿದರು. ದುಷ್ಕರ್ವಿುಗಳು ಧಾರವಾಡದ ಗೌರವಕ್ಕೆ ಕುತ್ತು ತರುವಂಥ ಹೇಯ ಕೃತ್ಯ ಮಾಡಿದ್ದಾರೆ. ಬೀದಿ ನಾಯಿಗಳಿಂದ ಉಪಟಳವಾಗುತ್ತಿದೆ ಎಂದು ಆಗಾಗ ಅನಿಸಿದರೂ, ಹತ್ಯೆ ಮಾಡುವಷ್ಟು ಸಮಸ್ಯೆ ಆಗಿರಲಿಲ್ಲ. ಅಲ್ಲದೆ, ಮಹಾನಗರ ಪಾಲಿಕೆ ವತಿಯಿಂದ ಗಂಡು ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯ ಮೂಲಕ ಕ್ರಮೇಣ ಬೀದಿ ನಾಯಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಕಾರ್ಯಕ್ರಮ ಜಾರಿಯಲ್ಲಿದೆ. ಮೂಕ ಪ್ರಾಣಿಗಳಿಗೆ ವಿಷ ಉಣಿಸಿದ್ದು ಘೊರ ಅಪರಾಧ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸ್ಥಳದಲ್ಲಿ ಸೇರಿದ್ದ ಜನರು ಒತ್ತಾಯಿಸಿದರು. ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net