ಬೀದಿನಾಯಿ ಹಾವಳಿಗೆ ಹೈರಾಣಾದ ಜನ

Published on

ನವೀನ್ ಶೆಟ್ಟಿ ಕೆರಾಡಿ ಆನೇಕಲ್
ಪಟ್ಟಣದಲ್ಲಿ ಬೀದಿ ನಾಯಿ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು ಒಂಟಿಯಾಗಿ ಓಡಾಡಲು ಭಯದ ವಾತಾವರಣ ನಿರ್ಮಾಣವಾಗಿದೆ.
ಪಟ್ಟಣದ ಹೊಸೂರು ಬಾಗಿಲು ರಸ್ತೆಯ ಮಾಂಸದ ಮಾರುಕಟ್ಟೆ ಹಾಗೂ ಸಂತೆ ಮಾರುಕಟ್ಟೆ ಸೇರಿ ಪ್ರಮುಖ ರಸ್ತೆಗಳಲ್ಲೇ ಶ್ವಾನಗಳ ಹಾವಳಿ ಹೆಚ್ಚಾಗಿದ್ದು, ಒಂದೊಂದು ಭಾಗದಲ್ಲೂ 20ಕ್ಕೂ ಹೆಚ್ಚು ನಾಯಿಗಳ ಗುಂಪಿನಲ್ಲಿ ಕಂಡು ಬರುತ್ತಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ. ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸ್ವಲ್ಪ ಯಾಮಾರಿದರೂ ನಾಯಿಗಳಿಂದ ಕಚ್ಚಿಸಿಕೊಳ್ಳುವಂತಾಗಿದೆ.
ಶ್ವಾನ ದಾಳಿಗಿಲ್ಲ ಕಡಿವಾಣ: ವಾರದ ಹಿಂದೆ ಪಟ್ಟಣದ ಮಾಂಸದ ಮಾರುಕಟ್ಟೆಯ ಸಮೀಪ ಬ್ಯಾಂಕೊಂದರ ಎದುರು ಪುಟಾಣಿ ಮೇಲೆ ಬೀದಿನಾಯಿ ದಾಳಿ ನಡೆಸಿದ್ದು, ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದೆ. ಇಂತಹ ಘಟನೆಗಳು ಆಗಾಗ್ಗೆ ಸಂಭವಿಸುತ್ತಲ್ಲೇ ಇದ್ದರೂ ಅಧಿಕಾರಿಗಳು, ಜನ ಪ್ರತಿನಿಧಿಗಳು ಜಾನ ಮೌನ ವಹಿಸಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.
ಪಟ್ಟಣದಲ್ಲಿ ಈ ಹಿಂದೆ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಸಲುವಾಗಿ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಶ್ವಾನಗಳೂ ಹೆಚ್ಚಾಗಿವೆ. ಜತೆಗೆ ಪದೇಪದೆ ದಾಳಿಯೂ ನಡೆಯುತ್ತಿವೆ. ಇನ್ನಾದರೂ ಮಾರುಕಟ್ಟೆ ಹಾಗೂ ಪ್ರಮುಖ ರಸ್ತೆಗಳಲ್ಲಿನ ಬೀದಿನಾಯಿ ಹಾವಳಿ ತಡೆಯಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಾಂಸದ ಅಂಗಡಿ ಮುಂದೆ ಜಮಾವಣೆ: ಮಾಂಸ ಮಾರುವ ಸ್ಥಳ ಹಾಗೂ ಕಬಾಬ್ ಅಂಗಡಿಗಳ ಎದುರು ಮಾಂಸ ಸೇವನೆಗಾಗಿ ನಾಯಿಗಳು ಗುಂಪು ಗುಂಪು ಸೇರಿರುತ್ತವೆ. ಈ ಸಂದರ್ಭ ಕಿತ್ತಾಟ ಮಾಡುಕೊಂಡು ಸಾರ್ವಜನಿಕರ ಮೇಲೆರಗುವುದು ಸಾಮಾನ್ಯವಾಗಿವೆ. ಈ ವೇಳೆ ಅಕ್ಕಪಕ್ಕದಲ್ಲಿ ವಾಹನ ಹೋದರೂ ಶ್ವಾನಗಳು ಹಿಂದೆಯೇ ಹೋಗುವುದರಿಂದ ಅಪಘಾತಕ್ಕೂ ಕಾರಣವಾಗುತ್ತಿವೆ.

ಆನೇಕಲ್‌ನ ಪ್ರಮುಖ ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆ ಪುರಸಭೆಗೆ ದೂರು ನೀಡಲಾಗಿದೆ. ಆದರೆ, ಇದುವರೆಗೂ ಕಡಿವಾಣ ಹಾಕುವ ಕೆಲಸ ಆಗಿಲ್ಲ. ಹಿರಿಯ ನಾಗರಿಕರು, ಶಾಲಾ ಮಕ್ಕಳು ಓಡಾಡಲು ತೊಂದರೆಯಾಗುತ್ತಿದ್ದು, ಪುರಸಭಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ಸನಾವುಲ್ಲ ವಾಟಾಳ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೀದಿನಾಯಿ ಹಾವಳಿಗೆ ಕಡಿವಾಣ ಹಾಕುವಂತೆ ಈಗಾಗಲೇ ಹಲವು ದೂರುಗಳು ಬಂದಿದ್ದು, ಶೀಘ್ರವೇ ಈ ಸಂಬಂಧ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಒಂದು ಬಾರಿ ಸಂತಾನ ಶಕ್ತಿ ಹರಣ ಶಸಚಿಕಿತ್ಸೆ ಮಾಡಿಸಲಾಗಿದ್ದು, ಒಂದು ನಾಯಿಗೆ 1,300 ರೂಪಾಯಿ ಖರ್ಚು ಬರುತ್ತಿದ್ದು, ಆನೇಕಲ್ ಪಟ್ಟಣದಲ್ಲಿ 3 ಸಾವಿರಕ್ಕೂ ಹೆಚ್ಚು ನಾಯಿಗಳಿದ್ದು, ಹಂತ ಹಂತವಾಗಿ ಚಿಕಿತ್ಸೆ ಮಾಡಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ.ಸುಧಾ ನಿರಂಜನ್ ಪುರಸಭಾ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net