

ಹಾಸನ: ಬೀದಿನಾಯಿಗಳ ದಾಳಿಗೆ ಇಬ್ಬರು ಮಕ್ಕಳು ತುತ್ತಾಗಿ ಗಂಭೀರವಾಗಿ ಗಾಯಗೊಂಡಿವ ಘಟನೆ ನಗರದಲ್ಲಿ ನಡೆದಿದೆ.
ಆಜಾದ್ ಮೊಹಲ್ಲಾದ ನಿವಾಸಿ ಮೊಹಮ್ಮದ್ ಯಾಸಿನ್ ಅವರ ಮಕ್ಕಳಾದ ಉಸ್ಮಾನ್ ಅಲಿ ಹಾಗು ಶೌಕತ್ ಅಲಿ ಎಂಬುವರು ನಾಯಿ ಕಡಿದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ದಿನಗಳ ಹಿಂದೆ ಮಕ್ಕಳು ಮನೆ ಸಮೀಪ ಆಟವಾಡುತ್ತಿದ್ದಾಗ ಏಕಾಏಕಿ ನಾಯಿ ಗುಂಪು ದಾಳಿ ಮಾಡಿವೆ. ನೋಡ ನೋಡುತ್ತಿದ್ದಂತೆಯೇ ಬೀದಿ ನಾಯಿಗಳು ಮಕ್ಕಳನ್ನು ಕಡಿದು ಗಂಭೀರವಾಗಿ ಗಾಯಗೊಳಿಸಿವೆ. ಅಮಾಯಕ ಮಕ್ಕಳನ್ನು ತೀವ್ರ ರೀತಿಯಲ್ಲಿ ಕಡಿದು ನಾಯಿಗಳು ಗಾಯಗೊಳಿಸಿದ್ದು, ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ನಗರದಲ್ಲಿ ಬೀದಿನಾಯಿಗಳ ಹಾವಳಿ ತೀವ್ರಗೊಂಡಿದ್ದು, ಇದರಿಂದ ಮಕ್ಕಳು, ಜನರು ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿ ನಾಯಿಗಳ ಹಾವಳಿ ತಡೆಗೆ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.