

ದಾವಣಗೆರೆ: ಮೊಬೈಲ್ ಕೆಲಸಗಳ ಒತ್ತಡ ತಗ್ಗಿಸುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಡಿ ಆಶಾ ಕಾರ್ಯಕರ್ತೆಯರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಜಿಪಂ ಸಿಇಒ ಡಾ.ಎ.ಚನ್ನಪ್ಪ ಅವರಿಗೆ ಮನವಿಪತ್ರ ಸಲ್ಲಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ತಿಪ್ಪೇಸ್ವಾಮಿ ಅಣಬೇರು ಮಾತನಾಡಿ ಆಶಾ ಸಾಫ್ಟ್‌ವೇರ್ ಸಮಸ್ಯೆ ಹಾಗೂ ಡಾಟಾ ಎಂಟ್ರಿ ಮಾಡುವ ಸಿಬ್ಬಂದಿ ಕೊರತೆಯಿಂದಾಗಿ ಕಾರ್ಯಕರ್ತೆಯರಿಗೆ ಹಣ ಬರುತ್ತಿಲ್ಲ. ಮೊಬೈಲ್ ಆಧಾರಿತ ಇ-ಸಂಜೀವಿನಿ, ಎನ್‌ಸಿಡಿ ಡಾಟಾ ಎಂಟ್ರಿ, ಆಧಾರ್ ನಂಬರ್ ಜೋಡಣೆ, ಆಯುಷ್ಮಾನ್ ಭಾರತ ಕಾರ್ಡ್ ನೋಂದಣಿ ಇತ್ಯಾದಿ ಕೆಲಕ್ಕೆ ಒತ್ತಾಯಿಸುವುದು ಸರಿಯಲ್ಲ ಎಂದರು.
ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಮಾತನಾಡಿ, ಮೊಬೈಲ್ ಆಧಾರಿತ ಚಟುವಟಿಕೆಗಳಿಗೆ ಬಲವಂತ ಮಾಡಬಾರದು. ಇಲಾಖೆ ಸುತ್ತೋಲೆಯಂತೆ ಪ್ರತಿ ತಿಂಗಳ 5ನೇ ತಾರೀಖಿನ ಒಳಗೆ ಸಂಬಳ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಭಾರತಿ, ಸುಮಾ ನಲ್ಲೂರು, ಲೀಲಾವತಿ, ರೀತಾ, ಮಂಜಮ್ಮ, ಲಕ್ಷ್ಮೀದೇವಿ, ವಿಶಾಲಾಕ್ಷಿ, ಕವಿತಾ, ಕಮಲಮ್ಮ, ರೇಖಾ, ಮುನಿಯಮ್ಮ, ರಾಧಾ, ಪರ್ವೀನ್‌ಬಾನು, ತಿಪ್ಪಮ್ಮ ಇತರರು ಇದ್ದರು