

ಬೆಳಗಾವಿ: ನಗರದ ವಿವಿಧೆಡೆ ಶುಕ್ರವಾರ ಬೈಕ್ ಸೇರಿ, ವಾಹನ ಸಂಚಾರ ಹೆಚ್ಚಾಗಿದ್ದರಿಂದ ಪೊಲೀಸರು ಸವಾರರಿಗೆ ಲಾಠಿ ಏಟಿನ ರುಚಿ ತೋರಿಸಿದರಲ್ಲದೆ, ಅನಗತ್ಯವಾಗಿ ಬೀದಿಗಿಳಿದ ಜನರ 300 ಬೈಕ್‌ಗಳನ್ನು ಶುಕ್ರವಾರ ಸೀಜ್ ಮಾಡಿದರು. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದರು. ಬೆಳಗಾವಿ ನಗರದಾದ್ಯಂತ ಅನಗತ್ಯವಾಗಿ ಸಂಚಾರ ಮಾಡುತ್ತಿದ್ದವರನ್ನು ತಡೆದು, ಲಾಠಿ ಏಟು ನೀಡಿದರು.
ಲಾಠಿ ಮೂಲಕ ಪಾಠ: ನಗರದಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರನ್ನು ತಡೆದ ಪೊಲೀಸರು, ಪರಿಶೀಲನೆ ನಡೆಸಿದರು. ತುರ್ತು ಕೆಲಸಗಳಿಗೆ ಹೊರಡುವ ಜನರನ್ನು ಹೊರತು ಪಡಿಸಿ, ಅನಗತ್ಯವಾಗಿ ರಸ್ತೆಗೆ ಬಂದ ವಾಹನ ಸವಾರರಿಗೆ ಲಾಠಿ ಬೀಸಿ ವಾಪಸ್ ಮನೆಯತ್ತ ಅಟ್ಟಿದರು. ಹೆಲ್ಮೆಟ್, ಮಾಸ್ಕ್ ಧರಿಸದವರು, ತ್ರಿಬಲ್ ರೈಡ್, ಸುಮ್ಮನೇ ತಿರುಗುತ್ತಿದ್ದವರಿಗೆ ಲಾಠಿ ಮೂಲಕ ಪಾಠ ಕಲಿಸಿದರು.
ಖಾಕಿ ಹದ್ದಿನ ಕಣ್ಣು: ಎಲ್ಲ ಮಾರುಕಟ್ಟೆ ಪ್ರದೇಶಗಳಲ್ಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ನಿಗದಿಯಿಂತೆ ಬೆಳಗ್ಗೆ 6ರಿಂದ 10ರ ವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸುತ್ತಿದ್ದಾರೆ. ಸಮಯ ಮೀರಿ ಬೀದಿಗಿಳಿದದ್ದೂ ಅಲ್ಲದೆ, ವಾಗ್ವಾದ ನಡೆಸಿದವರತ್ತ ಲಾಠಿ ಬೀಸುತ್ತಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಮಿಕರು, ಕಾರ್ಖಾನೆಗಳಿಗೆ ತೆರಳುತ್ತಿರುವ ಕಾರ್ಮಿಕರಿಗೂ ಪೊಲೀಸರು ಸಂಚರಿಸಲು ಅವಕಾಶ ನೀಡುತ್ತಿಲ್ಲ ಎಂಬ ದೂರು ಕೇಳಿ ಬಂದಿವೆ. ರೈತರು, ಕಟ್ಟಡ ಕಾರ್ಮಿಕರಿಗೆ ಕೆಲಸಕ್ಕೆ ಹೋಗಲು ಅಡ್ಡಿಪಡಿಸಬಾರದು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದ್ದರೂ ಪೊಲೀಸರು ಪರಿಗಣಿಸುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
ಜನತಾ ಕರ್ಫ್ಯೂವಿನ ನಾಲ್ಕನೇ ದಿನವಾದ ಶುಕ್ರವಾರವೂ ಜನರು ಅಗತ್ಯ ವಸ್ತು ಖರೀದಿಸಲು ಪರದಾಡಿದರು. ಪೊಲೀಸರು ನಗರದ ಎಲ್ಲೆಂದರಲ್ಲಿ ಬ್ಯಾರಿಕೇಡ್ ಹಾಕಿದ್ದರಿಂದ ನಾಗರಿಕರು ದಾರಿ ಹುಡುವುದರಲ್ಲೇ ಸುಸ್ತು ಹೊಡೆದರು. ಅಸಮರ್ಪಕವಾಗಿ ರಸ್ತೆಗಳನ್ನು ಬಂದ್ ಮಾಡಿರುವ ಪೊಲೀಸರ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಗರದ ಕ್ಲಬ್ ರಸ್ತೆ, ಕಾಲೇಜ್ ರಸ್ತೆ, ಕಾಕತಿ ವೇಸ್ ರಸ್ತೆ, ಸಂಗೊಳ್ಳಿ ರಾಯಣ್ಣ ರಸ್ತೆ, ಸಮಾದೇವಿ ಗಲ್ಲಿ ರಸ್ತೆ, ಗೋಂದಳಿ ಗಲ್ಲಿ ಸೇರಿ ಹಲವು ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆಂದು ಈ ಮಾರ್ಗದ ಮೂಲಕ ಬರುವ ಜನರು, ಬ್ಯಾರಿಕೇಡ್ ಅಳವಡಿಸಿದ್ದರಿಂದ ತರಕಾರಿ ಸಿಗುವ ಪ್ರದೇಶಕ್ಕೆ ಹೋಗಲು ಸುತ್ತು ಹೊಡೆದು ಸುಸ್ತಾದರು.
ಅನಗತ್ಯವಾಗಿ ಬೀದಿಗೆ ಬಂದ ಬೈಕ್‌ಗಳನ್ನು ತಾತ್ಕಾಲಿಕವಾಗಿ ಸೀಜ್ ಮಾಡಿದ್ದೇವೆ. ಕೆಲ ದಿನಗಳ ನಂತರ ದಂಡ ಕಟ್ಟಿಸಿಕೊಂಡು ಅವರಿಗೆ ಬೈಕ್ ಮರಳಿಸಲಾಗುವುದು. ಕರೊನಾ ನಿಯಂತ್ರಣಕ್ಕಾಗಿ ಕಠಿಣ ಕ್ರಮ ಕೈಗೊಳ್ಳಲೇಬೇಕಾಗಿದೆ.| ಡಾ. ಕೆ.ತ್ಯಾಗರಾಜನ್ ನಗರ ಪೊಲೀಸ್ ಆಯುಕ್ತ, ಬೆಳಗಾವಿ