ಬೀದಿ ಬದಿ ವ್ಯಾಪಾರಿಗಳಿಗೆ ಆಹಾರದ ಗುಣಮಟ್ಟ ಮತ್ತು ಸಂರಕ್ಷಣೆ ಕಾರ್ಯಾಗಾರ ಉದ್ಟಾಟನೆ

ಬೀದಿ ಬದಿ ವ್ಯಾಪಾರಿಗಳಿಗೆ ಆಹಾರದ ಗುಣಮಟ್ಟ ಮತ್ತು ಸಂರಕ್ಷಣೆ ಕಾರ್ಯಾಗಾರ ಉದ್ಟಾಟನೆ
Published on

ಹಾಸನ: ಬೀದಿ ಬದಿ ವ್ಯಾಪಾರಸ್ಥರು ಅಂಗಡಿ ನೋಂದಣಿ ವೇಳೆ ಸುಳ್ಳು ಮಾಹಿತಿ ಕೊಡಬಾರದು ಹಾಗೂ ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡಬೇಕು. ಯಾರಾದರೂ ಕಾನೂನು ಉಲ್ಲಂಘನೆ ಮಾಡಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ರವಿಕಾಂತ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜಿಲ್ಲಾಡಳಿತ, ನಗರಸಭೆ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ನಗರ ಜೀವನೋಪಾಯಗಳ ಅಭಿಯಾನ (ಡೇ ನಲ್ಮ್) ಕಾರ್ಯಕ್ರಮದಡಿ ಸ್ವ ನಿಧಿ ಸಮೃದ್ಧಿ ಯೋಜನೆಯಡಿ ಆಹಾರ ಬೀದಿ ಬದಿ ವ್ಯಾಪಾರಿಗಳಿಗೆ ಆಹಾರದ ಗುಣಮಟ್ಟ ಮತ್ತು ಸಂರಕ್ಷಣೆ, ಶುಚಿತ್ವ, ನೈರ್ಮಲ್ಯದ ಬಗ್ಗೆ ನುರಿತ ತಜ್ಞರಿಂದ ಮಾಹಿತಿ ತಿಳಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೋಂದಾವಣಿ ವೇಳೆ ಬೀದಿ ಬದಿ ವ್ಯಾಪಾರಸ್ಥರು ತಪ್ಪು ಮಾಹಿತಿ ನೀಡಿದರೆ ಅಂತಹ ನೋಂದಣಿಯನ್ನು ಕೂಡಲೇ ರದ್ದುಗೊಳಿಸುವ ಅಧಿಕಾರ ಸಂಬಂಧಪಟ್ಟ ಇಲಾಖೆಗೆ ಇರುತ್ತದೆ. ಜತೆಗೆ ಅಂತಹವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ನಗರ ಪ್ರದೇಶಗಳ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಜನರ ಸ್ಥಿತಿಗತಿಯನ್ನು ಅವಲೋಕನ ಮಾಡುವುದು, ಡೇ ನಲ್ಮ್ ಯೋಜನೆಯ ಅಡಿಯಲ್ಲಿ ಸಾಧನೆಯಾಗಿರುವ ಜಿಲ್ಲೆಯ ಪ್ರಗತಿ, ಯೋಜನೆಯ ಪರಿಣಾಮಕಾರಿ ಅನಷ್ಠಾನಕ್ಕೆ ಎದುರಾಗುತ್ತಿರುವ ಸವಾಲುಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ಚರ್ಚೆ ಮಾಡಲಾಯಿತು. ಪಿ.ಎಂ ಸ್ವ ನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಸ್ತರಿಗೆ ಡಿಜಿಟಲ್ ವಹಿವಾಟಿನ ಬಗ್ಗೆ ತಿಳಿಸಲಾಯಿತು. ಇದೆ ವೇಳೆ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರೋಪಾಯ ಕಂಡುಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ಸತೀಶ್ ಕುಮಾರ್, ಸುಜಲಾ ಕಾಲೇಜು ಕಾರ್ಯದರ್ಶಿ ಲೋಕೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂರಕ್ಷಣಾಧಿಕಾರಿ ಬಸವೇಗೌಡ, ಡೇ-ನಲ್ಮ್ ಜಿಲ್ಲಾ ಕೌಶಲಾಭಿವೃದ್ಧಿ ವ್ಯವಸ್ಥಾಪಕರಾದ ಕೋಮಲಾ ರಾಜಶೇಖರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ವ್ಯವಸ್ಥಾಪಕರಾದ ರವೀಂದ್ರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net