

ಆನೇಕಲ್: ಪಟ್ಟಣದ ರಸ್ತೆ ಬದಿಯಲ್ಲಿ ನಿರ್ಮಿಸಿಕೊಂಡಿದ್ದ 50ಕ್ಕೂ ಹೆಚ್ಚು ಪೆಟ್ಟಿಗೆ ಅಂಗಡಿಗಳನ್ನು ಪುರಸಭೆ ಅಧಿಕಾರಿಗಳು ಶನಿವಾರ ತೆರವುಗೊಳಿಸಿದರು. ಪೂರ್ವ ಮಾಹಿತಿ ನೀಡದೆ ಅಂಗಡಿ ತೆರವುಗೊಳಿಸಿದ್ದರಿಂದ, ಮಾಲೀಕರು ಕಣ್ಣೀರು ಹಾಕಿದರು.
ರಸ್ತೆಗಳ ಪಕ್ಕದಲ್ಲಿ ಪೆಟ್ಟಿಗೆ ಅಂಗಡಿ ಅಕ್ರಮವಾಗಿ ನಿರ್ಮಿಸಲಾಗಿತ್ತು. ಅದರಲ್ಲೂ ಸರ್ಕಾರಿ ಆಸ್ಪತ್ರೆಗೆ ಹೊಂದಿಕೊಂಡಿರುವ ಚರಂಡಿ ಕಸ ಕಡ್ಡಿಯಿಂದ ತುಂಬಿದೆ. ನೀರು ಸರಾಗವಾಗಿ ಹರಿಯದೆ, ದುರ್ವಾಸನೆ ಬೀರುತ್ತಿತ್ತು. ಹಾಗಾಗಿ, ಚರಂಡಿಯನ್ನು ಸ್ವಚ್ಛಗೊಳಿಸಲು ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು ಪುರಸಭೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಂಗಡಿ ತೆರವುಗೊಳಿಸುವ ಬಗ್ಗೆ ಅಂಗಡಿ ಮಾಲೀಕರಿಗೆ ಹಿಂದೆಯೇ ಮಾಹಿತಿ ನೀಡಲಾಗಿತ್ತು. ಆದರೆ, ಅವರು ತೆರವು ಮಾಡದ ಕಾರಣ ತೆರವುಗೊಳಿಸಲಾಯಿತು ಎಂದರು.
ತಳ್ಳು ಗಾಡಿಗಳನ್ನು ಬಾಡಿಗೆಗೆ ಪಡೆದು, ಸಾಲ ಮಾಡಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡುತ್ತಿದ್ದೆ. ಆದರೆ, ಅಧಿಕಾರಿಗಳು ಜೆಸಿಬಿ ತಂದು ಏಕಾಏಕಿ ಅಂಗಡಿ ತೆರವುಗೊಳಿಸಿದ್ದಾರೆ. ಗಾಡಿ, ಹಣ್ಣು ಮತ್ತು ತರಕಾರಿಯನ್ನೂ ನಾಶಪಡಿಸಲಾಗಿದೆ. ಇದು ಯಾವ ನ್ಯಾಯ? ನಮ್ಮ ಸಂಸಾರ ಸಾಗಿಸುವುದು ಹೇಗೆ? ಶೋಭಮ್ಮ, ಬೀದಿಬದಿ ವ್ಯಾಪಾರಿ ನಮ್ಮ ತರಕಾರಿ ಅಂಗಡಿ ಇತ್ತು. ಅಂಗಡಿಯಲ್ಲಿದ್ದ ತರಕಾರಿಯನ್ನೂ ತೆಗೆದುಕೊಳ್ಳಲು ಬಿಡದೆ, ಪುರಸಭೆಯವರು ಅಂಗಡಿ ನಾಶ ಮಾಡಿದ್ದಾರೆ. ಲಾಕ್‌ಡೌನ್ ಇರುವ ಸಂದರ್ಭದಲ್ಲಿ ನಾವು ಏನು ಕೆಲಸ ಮಾಡಬೇಕು? ಪ್ರಮೀಳಾ, ಬೀದಿಬದಿ ವ್ಯಾಪಾರಿ ಪುರಸಭೆ ಅಧಿಕಾರಿಗಳು ನನ್ನ ಗಮನಕ್ಕೆ ತಾರದೆ ಪೆಟ್ಟಿಗೆ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಹಾಗಾಗಿ ಜನರಿಗೆ ತೊಂದರೆಯಾಗಿದೆ. ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ನಿರ್ದಿಷ್ಟ ಅಳತೆಯ ಅಂಗಡಿಗಳನ್ನು ಬೇರೆಡೆ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಸ್ಥಳ ಗುರುತಿಸಲಾಗುವುದು. ಎನ್.ಎಸ್. ಪದ್ಮನಾಭ್, ಪುರಸಭೆ ಅಧ್ಯಕ್ಷ