

ಹಾಸನ: ಸಾರ್ವಜನಿಕರ ನೆಮದಿ ಕೆಡಿಸಿರುವ ಬೀದಿ ನಾಯಿಗಳ ಹಾವಳಿ ತಡೆಗೆ ಮುಂದಾಗಿರುವ ನಗರಸಭೆ ಮೊದಲ ಹಂತದಲ್ಲಿ 2300 ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಹಾಗು ರೇಬಿಸ್ ಲಸಿಕಾ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ನಗರದ ಮುಖ್ಯ ರಸ್ತೆ, ಮನೆ ಮುಂದೆ ಹಾಗು ಖಾಲಿ ನಿವೇಶನಗಳಲ್ಲಿ ಬೀಡು ಬಿಟ್ಟಿದ್ದ ಬೀದಿ ನಾಯಿಗಳು ಹಲವರ ಮೇಲೆ ದಾಳಿ ನಡೆಸುತ್ತಿವೆ. ಆಹಾರದ ಆಸೆಗಾಗಿ ಜನರ ಮೇಲೆ ಮುಗಿಬೀಳುತ್ತಿದ್ದ ನಾಯಿಗಳಿಂದಾಗಿ ಅನೇಕರು ಗಾಯಗೊಂಡಿದ್ದರು. ಮಕ್ಕಳು ಭಯ ಭೀತರಾಗಿ ಶಾಲೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಈ ಬಗ್ಗೆ ನಗರಸಭೆ ವ್ಯಾಪಕ ದೂರು ಕೇಳಿಬಂದ ಹಿನ್ನಲೆ ಬೀದಿ ನಾಯಿ ಹಾವಳಿ ತಡೆಗೆ ಮುಂದಾಗಿದ್ದು ಮುಂದಿನ ನಾಲ್ಕು ತಿಂಗಳ ಕಾರ್ಯಾಚರಣೆ ನಡೆಯಲಿದೆ. ಸಾಕು ನಾಯಿಗಳನ್ನು ಹೊರಗಡೆ ಬಿಡದಂತೆ ನಗರಸಭೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನಗರಸಭೆ ಇಂಜಿನೀಯರ್ ವೆಂಕಟೇಶ್ ಅವರು ಮಾತನಾಡಿ, ಬೀದಿ ನಾಯಿಗಳ ಸಂತಾನ ನಿಯಂತ್ರಣ ಉದ್ದೇಶದಿಂದ ಮೇಲಧಿಕಾರಿಗಳ ಅನುಮತಿ ಪಡೆದು ಸಂತಾನ ಹರಣ ಶಸತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಪ್ರತ್ಯೇಕ ಶೆಡ್ ತೆರೆದಿದ್ದು, ಸೆರೆ ಹಿಡಿದ ನಾಯಿಗಳನ್ನು ಅಲ್ಲಿಗೆ ತಂದು ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಚಿಕಿತ್ಸೆ ಬಳಿಕ ನಾಯಿಗಳನ್ನು ಸೆರೆ ಹಿಡಿದ ಜಾಗಕ್ಕೆ ಬಿಡಲಾಗುತ್ತದೆ ಎಂದು ಹೇಳಿದರು.
ಸಾಕು ನಾಯಿಗಳಿದ್ದರೆ ಮಾಲೀಕರು ಹೊರಗೆ ಬಿಡಬಾರದು. ಒಂದು ವೇಳೆ ಅಂತಹ ನಾಯಿಗಳು ಶಸ್ತ್ರಚಿಕಿತ್ಸೆಗೆ ಒಳಗಾದರೆ ನಗರಸಭೆ ಜವಾಬ್ದಾರಿಯಲ್ಲ. ನಗರಸಭೆ ಆರೋಗ್ಯಾಧಿಕಾರಿಗಳಾದ ಆದೀಶ್, ಪ್ರಸಾದ್, ಚೇತನ್, ಮಂಜುನಾಥ್ ಇತರರಿದ್ದರು.