

ಹನೂರು: ಮುಖ್ಯ ರಸ್ತೆಗಳಲ್ಲಿ ಬೀದಿ ನಾಯಿಗಳ ಅಡ್ಡಾದಿಡ್ಡಿ ಸಂಚಾರ ಜನರ ಜೀವಕ್ಕೆ ಕುತ್ತು ತರುತ್ತಿದ್ದು, ಸಂಕಷ್ಟಕ್ಕೆ ಸಿಲುಕವಂತೆ ಮಾಡುತ್ತಿವೆ. ತಾಲೂಕಿನಲ್ಲಿ 2 ದಿನದಲ್ಲೇ ನಾಯಿಗಳು ಅಡ್ಡ ಬಂದ ಪರಿಣಾಮ ಐವರು ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಸ್, ಕಾರು ಹಾಗೂ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸುತ್ತಿದ್ದು, ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದರಿಂದ ಸಾವು -ನೋವುಗಳು ಸಂಭವಿಸುತ್ತಿದ್ದು, ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಈಗಿರುವಾಗ ಮುಖ್ಯರಸ್ತೆಗಳಲ್ಲಿ ಬೀದಿ ನಾಯಿಗಳ ಅಡ್ಡಾದಿಡ್ಡಿ ಸಂಚಾರ ಜನರಿಗೆ ಸಂಚಕಾರವನ್ನು ತಂದೊಡ್ಡುತ್ತಿವೆ.
ದಿಢೀರ್ ನುಗ್ಗುವ ನಾಯಿಗಳಿಂದಾಗಿ ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಳ್ಳುತ್ತಿದ್ದು, ಮಾರ್ಗಮಧ್ಯೆ ನರಳಾಡುವಂತಾಗಿದೆ. ಕೆಲಸ ಕಾರ್ಯಗಳಿಗೆ ತೆರಳಬೇಕಿದ್ದವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುವುದರ ಮೂಲಕ ಯಾತನೆ ಅನುಭವಿಸುವಂತಾಗಿದೆ. ಕಳೆದ ತಿಂಗಳ ಹಿಂದೆ ತಾಲೂಕಿನ ಮಂಗಲ ಗ್ರಾಮದಲ್ಲಿ ನಾಯಿ ಅಡ್ಡ ಬಂದ ಪರಿಣಾಮ ಪ್ರದೀಪ್‌ಕುಮಾರ್ ಎಂಬುವರು ಗಾಯಗೊಂಡಿದ್ದರು. ಹಾಗೆಯೇ ಇನ್ನು ಕೆಲ ಗ್ರಾಮಗಳಲ್ಲೂ ಇಂತಹ ಘಟನೆಗಳು ಮರುಕಳುಹಿಸುತ್ತಲೇ ಇದೆ.
ಮೇ 16ರಂದು ಕೆಲಸದ ನಿಮಿತ್ತ ಬೈಕ್‌ನಲ್ಲಿ ರಾಮಾಪುರ ಗ್ರಾಮಕ್ಕೆ ತೆರಳಿ ಸ್ವಗ್ರಾಮ ಅಜ್ಜೀಪುರಕ್ಕೆ ಆಗಮಿಸುತ್ತಿದ್ದಾಗ ಅಂಬಿಕಾಪುರ ಗ್ರಾಮದ ಬಳಿ ನಾಯಿ ಅಡ್ಡ ಬಂದ ಪರಿಣಾಮ ನಿಯಂತ್ರಿಸಲು ಸಾಧ್ಯವಾಗದೇ ಸುನೀತಾ, ಇವರ ಮಕ್ಕಳಾದ ಅನನ್ಯಾ ಹಾಗೂ ಚಿರಾಗ್ ಬಿದ್ದು ಗಾಯಗೊಂಡಿದ್ದಾರೆ. ಹನೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಯಿತು. ಶನಿವಾರ ಸಂಜೆ 7ರ ವೇಳೆಯಲ್ಲಿ ಎಲ್ಲೇಮಾಳ ಗ್ರಾಮದ ರಂಗರಾಜು ಹಾಗೂ ಮುರುಗೇಶ್ ಬೈಕ್‌ನಲ್ಲಿ ಬರುತ್ತಿದ್ದಾಗ ನಾಯಿ ಅಡ್ಡ ಪರಿಣಾಮ ಇಬ್ಬರ ತಲೆಗೆ ತೀವ್ರ ಪೆಟ್ಟಾಗಿದ್ದು, 112 ಸಿಬ್ಬಂದಿ ಕಾಮಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ಮುಖ್ಯ ರಸ್ತೆಗಳಲ್ಲಿ ನಾಯಿಗಳ ಚೆಲ್ಲಾಟ ಬೈಕ್ ಸವಾರರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.
ಗ್ರಾಮಗಳಲ್ಲಿ ನಾಯಿಗಳ ಹಿಂಡು ಅಡ್ಡಾದಿಡ್ಡಿ ಸಂಚರಿಸುತ್ತಿದ್ದರೆ ಇಲ್ಲವೇ ಬೀದಿಯಲ್ಲಿ ಮಲಗಿದ್ದರೆ ಜನರು ಓಡಿಸುತ್ತಾರೆ. ಇದರಿಂದ ಮುಖ್ಯ ರಸ್ತೆಗೆ ಆಗಮಿಸಿ ಅಡ್ಡಾದಿಡ್ಡಿ ಸಂಚರಿಸುತ್ತವೆ. ಪರಿಣಾಮ ಬೈಕ್ ಸವಾರರು ಬಿದ್ದು ಗಾಯಗೊಳ್ಳಲು ಮುಖ್ಯ ಕಾರಣವಾಗಿದೆ. ಇನ್ನು ಗ್ರಾಮಗಳಲ್ಲಿ ಹೋಟೆಲ್, ಬೇಕರಿ ಹಾಗೂ ಚಿಕನ್ ಸೆಂಟರ್‌ನ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಸುರಿಯಲಾಗುತ್ತಿದೆ. ಆಹಾರವನ್ನು ಅರಸಿ ನಾಯಿಗಳ ರಸ್ತೆಗೆ ಆಗಮಿಸುತ್ತಿವೆ. ರಸ್ತೆಯಲ್ಲೇ ಮಲಗಿರುತ್ತವೆ. ನಾಯಿಗಳ ಅಡ್ಡಾದಿಡ್ಡಿ ಸಂಚಾರ ಬೈಕ್ ಸವಾರರ ಜೀವಕ್ಕೆ ಕುತ್ತು ತರುತ್ತಿದೆ.
ನಿಯಂತ್ರಣವೇನು?: ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದರಿಂದ ಹಾವಳಿಯನ್ನು ತಡೆಗಟ್ಟಬಹುದು. ಗ್ರಾಮದ ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯದಂತೆ ಆಯಾ ಗ್ರಾಮ ಪಂಚಾಯಿತಿ ಕ್ರಮಕೈಗೊಳ್ಳುವುದರಿಂದ ನಾಯಿಗಳು ರಸ್ತೆಗೆ ಧಾವಿಸದಂತೆ ತಡೆಗಟ್ಟಬಹುದು. ಇದರಿಂದ ಬೈಕ್ ಸವಾರರು ಬಿದ್ದು ಗಾಯಗೊಳ್ಳುವುದನ್ನು ತಪ್ಪಿಸಬಹುದು.
ಸಾರ್ವಜನಿಕರಿಂದ ಒತ್ತಾಯ: ಕೆಲ ಗ್ರಾಮಗಳಲ್ಲಿ ನಾಯಿಗಳು ಹೆಚ್ಚು ಮುಖ್ಯ ರಸ್ತೆಯಲ್ಲೇ ಸಂಚರಿಸುತ್ತಿರುವುದರಿಂದ ವಾಹನಗಳಿಗೆ ಸಿಲುಕಿ ಮೃತಪಡುತ್ತಿರುವುದು ನಡೆಯುತ್ತಲೇ ಇದೆ. ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಇದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಜತೆಗೆ ಬೈಕ್ ಸವಾರರು ಬಿದ್ದು ಗಾಯಗೊಳ್ಳುವುದನ್ನು ತಡೆಗಟ್ಟಬಹುದು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂಬುದಾಗಿ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿದೆ.
ತಾಲೂಕಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮುಖ್ಯರಸ್ತೆಯಲ್ಲಿ ಸಂಚರಿಸುತ್ತಿವೆ. ನಾಯಿ ಅಡ್ಡ ಬಂದು ಬೈಕ್ ಸವಾರರು ನಿಯಂತ್ರಿಸಲಾಗದೆ ಬಿದ್ದು ಗಾಯಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಅಧಿಕಾರಿಗಳು ಇತ್ತ ಗಮನಹರಿಸಿ ನಾಯಿಗಳ ಹಾವಳಿ ತಡೆಯಬೇಕು. ಅಮ್ಜಾದ್‌ಖಾನ್ ಅಧ್ಯಕ್ಷ, ತಾಲೂಕು ರೈತ ಸಂಘ ಹನೂರು