

ಗೋಣಿಕೊಪ್ಪ: ಬೆಂಗಳೂರಿನ ಜೀವ ರಕ್ಷಕ ಟ್ರಸ್ಟ್, ಮೈಸೂರು ರೋಟರಿ, ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್, ರೋಟರಿ ಇ ಕ್ಲಬ್, ವಿರಾಜಪೇಟೆ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದಲ್ಲಿ ಗೋಣಿಕೊಪ್ಪದಲ್ಲಿ ಆಯೋಜಿಸಿದ್ದ ಹೆಲ್ಮೆಟ್ ಮತ್ತು ಸೀಟ್‌ಬೆಲ್ಟ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೀದಿ ನಾಟಕದ ಮೂಲಕ ಹೆಲ್ಮೆಟ್ ಜೀವ ರಕ್ಷಕ ಎಂಬುವುದನ್ನು ಬಿಂಬಿಸಲಾಯಿತು. ಹೆಲ್ಮೆಟ್ ಧರಿಸಿದರೆ ದೊಡ್ಡ ಮಟ್ಟದ ಅಪಘಾತಕ್ಕೆ ಸಿಲುಕಿದರೂ ಸಾವಿನಿಂದ ಪಾರಾಗುವ ಅವಕಾಶ ಹೆಚ್ಚಿದೆ ಎಂಬುವುದನ್ನು ತಿಳಿಸಿಕೊಡಲಾಯಿತು. ಮದ್ಯ ಸೇವನೆ, ಮೊಬೈಲ್ ಬಳಕೆ ಮಾಡಿಕೊಂಡು ದ್ವಿಚಕ್ರ ಸವಾರಿ ಅಪಾಯ ಎಂಬುವುದನ್ನು ತಿಳಿಸಿದರು. ಬೇಜವಾಬ್ದಾರಿಯಿಂದ ಅಪಘಾತ ಸಂಭವಿಸಿದಾಗ ಕುಟುಂಬಕ್ಕೆ ಆಗುವ ಆಘಾತದ ಕುರಿತು ಅರಿವು ಮೂಡಿಸಲಾಯಿತು.
ರಸ್ತೆ ಸುರಕ್ಷತೆ, ಪ್ರಥಮ ಚಿಕಿತ್ಸೆ, ಗಾಯಗೊಂಡ ರೋಗಿಯ ಚಿಕಿತ್ಸೆ, ತಲೆಗೆ ಪೆಟ್ಟಾದಾಗ, ಕುತ್ತಿಗೆಗೆ ಪೆಟ್ಟಾದಾಗ, ತೀವ್ರ ರಕ್ತಸ್ರಾವ, ಮೂಳೆ ಮುರಿತ, ಜಜ್ಜಿದ ಗಾಯ, ಮೂರ್ಚೆ ಹೋಗುವುದು, ಸುಟ್ಟಗಾಯ ಸಂದರ್ಭ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎಂಬುದರ ಕುರಿತು ಮಾಹಿತಿ ನೀಡಿದರು.
್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಖಜಾಂಚಿ ಡಾ.ಚಂದ್ರಶೇಖರ್ ಮಾತನಾಡಿ, ಅಪಘಾತ ಸಂದರ್ಭ ಪ್ರಜ್ಞೆ ತಪ್ಪಿದ ಗಾಯಾಳುಗಳಿಗೆ ಬಾಯಿಗೆ ನೀರು ಹಾಕುವುದರ ಬದಲು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಉತ್ತಮ ಮಾರ್ಗ. ಈ ಮೂಲಕ ಜೀವ ಉಳಿಸಲು ಮುಂಜಾಗ್ರತೆ ವಹಿಸಿದಂತಾಗುತ್ತದೆ ಎಂದರು.
ಬೆಂಗಳೂರು ಜೀವ ರಕ್ಷಕ ಟ್ರಸ್ಟ್ ಸಿಇಒ ಡಾ.ರಾಮಕೃಷ್ಣ, ವಿರಾಜಪೇಟೆ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ವೈದ್ಯರಾದ ಡಾ.ಶಾಂತಲಾ, ಡಾ.ಜಿತೇಶ್, ಪ್ರಮುಖರಾದ ಮಂಜೇಶ್, ತೇಜಸ್ ಇದ್ದರು.
ಮೈಸೂರು ಮೂಲಕ ತಿತಿಮತಿ ಮಾರ್ಗದಲ್ಲಿ ಗೋಣಿಕೊಪ್ಪಕ್ಕೆ ಆಗಮಿಸಿದ ಅಭಿಯಾನದ ತಂಡ ಬಸ್ ನಿಲ್ದಾಣದ ಎದುರು ಜಾಗೃತಿ ಮೂಡಿಸಿತು. ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಜಾಗೃತಿ ನಂತರ ವಿರಾಜಪೇಟೆ, ಮಡಿಕೇರಿಗೆ ತೆರಳಿತು.