ಬೀದರ್​​ನಲ್ಲಿ ಶೀಘ್ರ ಕರೊನಾ ಲ್ಯಾಬ್​ ಆರಂಭ

28kmr3(Prabhu chavan, MLA)
Published on

ಬೀದರ್: ಬ್ರಿಮ್ಸ್ ಆಸ್ಪತ್ರೆಯಲ್ಲಿ ಕರೊನಾ ವೈರಾಣು ಪರೀಕ್ಷಾ ಕೇಂದ್ರ(ಲ್ಯಾಬ್) ಶೀಘ್ರ ಆರಂಭವಾಗಲಿದೆ. ಈ ಸಂಬಂಧದ ಎಲ್ಲ ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರಕ್ಕೆ ಸಂಬಂಧಿಸಿದ ಕೆಲವು ಉಪಕರಣ ಬಂದಿವೆ. ಇನ್ನೂ ಕೆಲ ವಾರದೊಳಗೆ ಬರಲಿವೆ. ಸಂಬಂಧಿಸಿದ ಸಿಬ್ಬಂದಿ ಮತ್ತು ತಾಂತ್ರಿಕ ನೌಕರರಿಗೆ ತರಬೇತಿ ನೀಡಲಾಗಿದೆ. ಇದಕ್ಕೆ ಅವಶ್ಯವಿರುವ ಎಲ್ಲದಕ್ಕೂ ವ್ಯವಸ್ಥೆ ಮಾಡಲಾಗುತ್ತಿದ್ದು, ಶೇ.90 ಕೆಲಸ ಪೂರ್ಣಗೊಂಡಿದ್ದು, ಬೇಗ ಇಲ್ಲಿಯೇ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. ಬೀದರ್​ನಲ್ಲೇ ಪರೀಕ್ಷಾ ಕೇಂದ್ರ ಆರಂಭವಾದಲ್ಲಿ ಬೆಂಗಳೂರು, ಕಲಬುರಗಿ ಹಾಗೂ ಇತರ ಕಡೆಗೆ ಸ್ಯಾಂಪಲ್ ಕಳಿಸುವುದು ತಪ್ಪಲಿದೆ. ಇದರ ಜತೆಗೆ ಸ್ಥಳೀಯವಾಗಿ ರೋಗಿಗಳ ರಕ್ತ ಮತ್ತು ಕಫ ಪರೀಕ್ಷೆ ನಡೆಸುವುದು ತೀವ್ರವಾಗಲಿದೆ. ಪರೀಕ್ಷಾ ವರದಿ ಬೇಗ ಕೈಗೆ ಸೇರಿದರೆ ಪಾಸಿಟಿವ್ ರೋಗಿಯ ಪ್ರಥಮ, ದ್ವಿತೀಯ ಸಂಪರ್ಕಿತರ ಪತ್ತೆ ಹಚ್ಚುವಿಕೆ ಬೇಗ ನಡೆದು ಸೋಂಕು ಇತರರಿಗೆ ಹರಡುವುದು ತಡೆಯಲು ಸಾಧ್ಯ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net