ಬೀದರ್​ ಬ್ರಿಮ್ಸ್​​​ನಲ್ಲಿ ಕರೊನಾ ಲ್ಯಾಬ್ ಪ್ರಾರಂಭ

coronar lab
Published on

ಬೀದರ್: ಜಿಲ್ಲೆಯ ಜನರ ಬಹು ನಿರೀಕ್ಷಿತ ಕೋವಿಡ್-19 ಮೊಲಿಕ್ಯೂಲರ್ ವೈರಾಲೋಜಿ (ಸೂಕ್ಷ್ಮಾಣು ರೋಗ ಪತ್ತೆ) ಪ್ರಯೋಗಾಲಯ ಸೋಮವಾರ ಬ್ರಿಮ್ಸ್ನಲ್ಲಿ ಆರಂಭಿಸಲಾಗಿದೆ. 1.86 ಕೋಟಿ ರೂ. ವೆಚ್ಚದಲ್ಲಿ ಈ ಲ್ಯಾಬ್ ಸ್ಥಾಪಿಸಲಾಗಿದೆ. ಇದರೊಂದಿಗೆ ಇನ್ಮುಂದೆ ಕರೊನಾ ಸೇರಿ ಅನೇಕ ಬಗೆಯ ಸೂಕ್ಷ್ಮಾಣು ರೋಗ ಪರೀಕ್ಷೆ ಇಲ್ಲಿ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿ, ಕರೊನಾ ಸೇರಿ ಅನೇಕ ರೀತಿಯ ಸೂಕ್ಷ್ಮಾತೀಸೂಕ್ಷ್ಮ ವೈರಸ್ನಿಂದ ಅಂಟುವ ರೋಗಗಳನ್ನು ಈ ಲ್ಯಾಬ್ನಲ್ಲಿ ಪತ್ತೆ ಹಚ್ಚಲಾಗುತ್ತದೆ. ಇಲ್ಲಿ ಲ್ಯಾಬ್ ಆರಂಭಿಸುವ ಅಗತ್ಯ ಮತ್ತು ಅನಿವಾರ್ಯತೆ ಬಗ್ಗೆ ಸಿಎಂ ಯಡಿಯೂರಪ್ಪ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಮನವರಿಕೆ ಮಾಡಲಾಗಿತ್ತು. ಕೊಟ್ಟ ಮಾತಿನಂತೆ ಲ್ಯಾಬ್ ಆರಂಭವಾಗಿದೆ ಎಂದರು.
ನಗರದಲ್ಲೇ ವೈರಾಣು ಲ್ಯಾಬ್ ಆರಂಭವಾಗಿರುವುದು ಜಿಲ್ಲೆ ಜನರ ಆರೋಗ್ಯ ಸೇವೆ ಹಿತದೃಷ್ಟಿಯಿಂದ ಅತ್ಯುತ್ತಮ ಹೆಜ್ಜೆಯಾಗಿದೆ. ಈ ಪ್ರಯೋಗಾಲಯದಿಂದಾಗಿ ಮುಂಬರುವ ದಿನಗಳಲ್ಲಿ ಕರೊನಾ ತಪಾಸಣೆ ಹಾಗೂ ಶೀಘ್ರ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ ಮಾತನಾಡಿ, ಸಂಸ್ಥೆಯ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಅಧೀನದಲ್ಲಿ ಈ ಲ್ಯಾಬ್ ರಾಜ್ಯ ಪ್ರಕೃತಿ ವಿಕೋಪ ನಿಯಂತ್ರಣ ನಿಧಿಯಿಂದ ನಿರ್ಮಾಣಗೊಂಡಿದೆ. ಇದು ಐಸಿಎಂಆರ್ ಮಾನ್ಯತೆ ಹೊಂದಿದೆ. ಇಲ್ಲಿ ಒಬ್ಬ ಮುಖ್ಯ ಸಂಶೋಧಕ, ಇಬ್ಬರು ವಿಜ್ಞಾನಿ ಹಾಗೂ ಪರಿಣತ ಪ್ರಯೋಗಾಲಯ ತಂತ್ರಜ್ಞರಿರುತ್ತಾರೆ. ಇವರು ಐಸಿಎಂಆರ್ ಮಾರ್ಗಸೂಚನೆಯಂತೆ ಕಾರ್ಯನಿರ್ವಹಿಸುವರು. ಮೂರು ಪಾಳಿ ಹಾಗೂ ಪೂರ್ಣ ಪ್ರಮಾಣ ಕಾರ್ಯನಿರ್ವಹಿಸಿದ್ದಲ್ಲಿ ನಿತ್ಯ 600 ಮಾದರಿ ಪರೀಕ್ಷೆ ಮಾಡಬಹುದು ಎಂದು ಹೇಳಿದರು.
ಸಂಸದ ಭಗವಂತ ಖೂಬಾ, ಶಾಸಕರಾದ ಬಂಡೆಪ್ಪ ಖಾಶೆಂಪುರ, ರಹೀಮ್ ಖಾನ್, ಬಿ.ನಾರಾಯಣರಾವ, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಜಿಪಂ ಅಧ್ಯಕ್ಷೆ ಗೀತಾ ಪಂಡಿತರಾವ ಚಿದ್ರಿ, ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್ಪಿ ಡಿ.ಎಲ್. ನಾಗೇಶ, ಎಸಿ ಅಕ್ಷಯ್ ಶ್ರೀಧರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿ.ಜಿ. ರೆಡ್ಡಿ, ವೈದ್ಯಾಧಿಕಾರಿಗಳಾದ ಡಾ.ರತಿಕಾಂತ ಸ್ವಾಮಿ, ಡಾ.ವಿಜಯಕುಮಾರ ಅಂತಪ್ಪನವರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net