ಬೀದರ್‌ನಲ್ಲಿ ಫೆ.೧೦ರಿಂದ ವಚನ ವಿಜಯೋತ್ಸವ

27BK3
ಬೀದರ್‌ನ ಬಸವಗಿರಿಯಲ್ಲಿ ಫೆ.೧೦ರಿಂದ ನಡೆಯುವ ವಚನ ವಿಜಯೋತ್ಸವ ನಿಮಿತ್ತ ಬಸವಕಲ್ಯಾಣದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿದರು. ಪೂಜ್ಯ ಸತ್ಯಕ್ಕ ತಾಯಿ, ಶಂಕರ ಕರಣೆ, ಲಕ್ಷ್ಮೀಬಾಯಿ ಪಾಟೀಲ, ಸುಲೋಚನಾ ಗುದಗೆ, ದತ್ತಾತ್ರೇಯ ಮೂಲಗೆ, ವೆಂಕಟರೆಡ್ಡಿ, ಲಕ್ಷ್ಮೀಬಾಯಿ ಇದ್ದರು.
Published on

ಬಸವಕಲ್ಯಾಣ: ಶರಣರ ವಚನಗಳು ಅಧ್ಯಾತ್ಮದ ತವನಿಧಿ, ಮಾನವೀಯತೆಯ ಸಾಗರ, ವಚನ ಸಾಹಿತ್ಯ ಸೀಮಾತೀತ, ಕಾಲಾತೀತವಾಗಿ ಸದಾ ಪ್ರಸ್ತುತ. ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯ ಉಳಿಸಿಕೊಟ್ಟದರ ಹಿಂದೆ ವೀರಗಾಥೆ ಇದೆ. ಬಲಿದಾನವಿದೆ ಎಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.

ಬೀದರ್ ಬಸವ ಸೇವಾ ಪ್ರತಿಷ್ಠಾನದಿಂದ ಫೆಬ್ರವರಿ ೧೦ರಿಂದ ೩ ದಿನಗಳ ಕಾಲ ಬೀದರ್‌ನ ಬಸವಗಿರಿಯಲ್ಲಿ ನಡೆಯವ ವಚನ ವಿಜಯೋತ್ಸವ ಕಾರ್ಯಕ್ರಮದ ನಿಮಿತ್ತ ನಗರದ ಹರಳಯ್ಯನವರ ಗವಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರತಿವರ್ಷ ಬಸವಗಿರಿಯಲ್ಲಿ ಚನ್ನಬಸವಣ್ಣನವರ ಸ್ಮರಣೋತ್ಸವದಂದು ವಚನ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಮೂರು ದಿನಗಳ ಉತ್ಸವದಲ್ಲಿ ಸಾಮೂಹಿಕ ಇಷ್ಟಲಿಂಗಯೋಗ, ವಚನ ಪಾರಾಯಣ, ಅನುಭಾವ ಗೋಷ್ಠಿ, ಗುರುಬಸವ ಪುರಸ್ಕಾರ, ವಚನ ಸಾಹಿತ್ಯ ಮೆರವಣಿಗೆ, ವಚನ ಸಾಹಿತ್ಯಕ್ಕೆ ಪಟ್ಟಗಟುವಿಕೆ, ಸಾಂಸ್ಕೃತಿ ಸೇರಿ ವಿವಿಧ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿದ್ದು, ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ, ಶ್ರೀ ಬಸವೇಶ್ವರ ಹಿರಿಯ ನಾಗರಿಕರ ಒಕ್ಕೂಟದ ಕಾರ್ಯದರ್ಶಿ ಶಂಕರ ಕರಣೆ, ಲಕ್ಷ್ಮೀಬಾಯಿ ಪಾಟೀಲ, ಸುಲೋಚನಾ ಗುದಗೆ, ದತ್ತಾತ್ರೇಯ ಮೂಲಗೆ, ವೆಂಕಟರೆಡ್ಡಿ, ಲಕ್ಷ್ಮೀಬಾಯಿ ಇದ್ದರು. ಅಕ್ಕನ ಬಳಗದವರು ಪ್ರಾರ್ಥನೆ ನಡೆಸಿಕೊಟ್ಟರು. ಗಣಪತಿ ಕಾಸ್ತೆ ಸ್ವಾಗತಿಸಿದರು. ಹಣಮಂತ ಕುಕ್ಕಾ ಪಾಟೀಲ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net