

ಭಾಲ್ಕಿ: ಡಾ.ಚನ್ನಬಸವ ಪಟ್ಟದ್ದೇವರು ಬ್ಯಾಂಕ್ ಮೂರು ಶಾಖೆಗಳೊಂದಿಗೆ ಜಿಲ್ಲೆಯಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಬೀದರ್ ನಗರದಲ್ಲಿ ಪಟ್ಟದ್ದೇವರ ಬ್ಯಾಂಕ್ ಶಾಖೆ ತೆರೆಯಲು ತೀರ್ಮಾನಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಿ.ಕೆ.ಸಿದ್ರಾಮ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಚನ್ನಬಸವ ಪಟ್ಟದ್ದೇವರು ಸಹಕಾರ ಸಂಘದ ೨೦ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಕ್ತರ ಮತ್ತು ಗ್ರಾಹಕರ ಒತ್ತಾಸೆ ಮೇರೆಗೆ ದೀಪಾವಳಿ ಮುನ್ನ ಬೀದರ್‌ನಲ್ಲಿ ಬ್ಯಾಂಕ್ ಶಾಖೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಹಕರು ದಾಖಲೆ ರೀತಿಯಲ್ಲಿ ೬೧ಕೋಟಿ ರೂ. ಠೇವಣಿ ಇಟ್ಟಿದ್ದಾರೆ. ಬಡವರು, ಸಣ್ಣ ವ್ಯಾಪಾರಸ್ಥರಿಗೆ ೩೪ ಕೋಟಿ ರೂ. ಸಾಲ ನೀಡಲಾಗಿದೆ. ಶೇ.೯೦ ಸಾಲ ವಸೂಲಿ ಇದೆ. ಉಭಯ ಪೂಜ್ಯರ ಮಾರ್ಗದರ್ಶನ, ಆಡಳಿತ ಮಂಡಳಿ ಸಹಕಾರ, ಸಿಬ್ಬಂದಿ ಶ್ರಮದಿಂದ ಬ್ಯಾಂಕ್ ಪ್ರಗತಿಯತ್ತ ದಾಪುಗಾಲು ಇಟ್ಟಿದೆ. ಪ್ರಸಕ್ತ ವರ್ಷ ಬ್ಯಾಂಕ್ ೩೫ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದರು.
ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಡವರು, ನಿರ್ಗತಿಕರ, ತುಳಿತಕ್ಕೊಳಗಾದವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಬಸವಣ್ಣನವರ ಸದಾಶಯ ಆಗಿತ್ತು. ಅದರಂತೆ ಗುರುಗಳ ಹೆಸರಿನಲ್ಲಿ ಬಡವರಿಗೆ ಸಕಾಲಕ್ಕೆ ಹಣಕಾಸಿನ ವ್ಯವಸ್ಥೆ ಕಲ್ಪಿಸಲು ೨೦ ವರ್ಷದ ಹಿಂದೆ ಆರಂಭಿಸಿದ ಬ್ಯಾಂಕ್ ದೊಡ್ಡದಾಗಿ ಬೆಳೆದು ಎಲ್ಲರ ವಿಶ್ವಾಸ ಗಳಿಸಿರುವುದು ಹೆಮ್ಮೆ ಎಂದರು.
ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಕೂಲಿಕಾರ್ಮಿಕರು, ದುರ್ಬಲ ವರ್ಗದವರು, ಸಣ್ಣ ವ್ಯಾಪಾರಸ್ಥರಿಗೆ ನೆರವು ನೀಡಲು ಸ್ಥಾಪಿಸಿರುವ ಬ್ಯಾಂಕ್ ಭಕ್ತರ ಸಹಕಾರದೊಂದಿಗೆ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಹತ್ತಾರು ಜನರಿಗೆ ಉದ್ಯೋಗ ನೀಡುವ ಜತೆಗೆ ಬಡವರಿಗೆ ಸುಲಭವಾಗಿ ಸಾಲ ಸೌಲಭ್ಯ ಕಲ್ಪಿಸುತ್ತಿದೆ ಎಂದರು. ಬ್ಯಾAಕ್‌ನ ೧೫ ಉತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತು. ವ್ಯವಸ್ಥಾಪಕ ಗಣಪತಿ ಬಾವುಗೆ ವಾರ್ಷಿಕ ವರದಿ ವಾಚಿಸಿದರು. ಬ್ಯಾಂಕ್ ಉಪಾಧ್ಯಕ್ಷ ಶರಣಪ್ಪ ಬಿರಾದಾರ, ನಿರ್ದೇಶಕರಾದ ರಾಜಶೇಖರ ಅಷ್ಟೂರೆ, ಜಯರಾಜ ಖಂಡ್ರೆ, ವೈಜನಾಥ ಪಂಚಾಳ, ರವಿ ಮಿಸೆ, ಶರದ ಸಿರ್ಸೆ, ಬಂಡೆಪ್ಪ ಕಂಟೆ, ಪ್ರಕಾಶ ಘುಳೆ, ಚಂದ್ರಶೇಖರ ಪಾಟೀಲ್ ಇತರರಿದ್ದರು. ವೀರಣ್ಣ ಕುಂಬಾರ ನಿರೂಪಣೆ ಮಾಡಿದರು. ನಿರ್ದೇಶಕ ಅನಿಲ ಹಾಲಕುಡೆ ವಂದಿಸಿದರು.