

ಬೀದರ್: ಕ್ಷೇತ್ರದ ಜನತೆ ಅನುಕೂಲಕ್ಕಾಗಿ ಬೀದರ್ ನಿಂದ ಹುಬ್ಬಳ್ಳಿಗೆ ರೈಲು ಸೇವೆಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಶುಭ ಸುದ್ದಿ ನೀಡಿದೆ ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಸದ್ಯ ಪ್ರಾಯೋಗಿಕವಾಗಿ ಮೂರು ದಿನಗಳ ಸೇವೆ ಇರಲಿದೆ. ಇದೇ 13, 20 ಹಾಗೂ 27ರಂದು (ರೈಲು ಸಂಖ್ಯೆ 07635) ನಾಂದೇಡ್ ನಿಂದ ಮಧ್ಯಾಹ್ನ 2.10ಕ್ಕೆ ಹೊರಟು ಪರಳಿ, ಉದಗೀರ, ಭಾಲ್ಕಿ ಮೂಲಕ ರಾತ್ರಿ 8ಕ್ಕೆ ಬೀದರ್ ಗೆ ಬರಲಿದೆ. ಇಲ್ಲಿಂದ ಜಹೀರಾಬಾದ್, ಸೇಡಂ, ಚಿತ್ತಾಪುರ, ತಾಂಡೂರ, ಗುಂತಕಲ್, ಬಳ್ಳಾರಿ, ಹೊಸಪೇಟ, ಕೊಪ್ಪಳ, ಗದಗ ಮಾರ್ಗವಾಗಿ ಹುಬ್ಬಳ್ಳಿಗೆ ಮರು ದಿನ ಬೆಳಗ್ಗೆ 10ಕ್ಕೆ ತಲುಪಲಿದೆ. 14, 21 ಮತ್ತು 28 ರಂದು (ರೈಲು ಸಂಖ್ಯೆ 07636) ಹುಬ್ಬಳ್ಳಿ ಯಿಂದ ಬೆಳಗ್ಗೆ 11ಕ್ಕೆ ಹೊರಟು ಬಂದ ಮಾರ್ಗವಾಗಿ ಅದೇ ದಿನ ರಾತ್ರಿ 10.55ಕ್ಕೆ ಬೀದರ್ ಮತ್ತು ಮರು ದಿವಸ ಬೆಳಗ್ಗೆ 6.50ಕ್ಕೆ ನಾಂದೇಡ್ ತಲುಪಲಿದೆ ಎಂದು ಹೇಳಿದ್ದಾರೆ.
ಬೀದರ್ ನಿಂದ ಹುಬ್ಬಳ್ಳಿಗೆ ಚಲಿಸುತ್ತಿರುವ ಈ ರೈಲು ಜಿಲ್ಲೆ ಸಂಪರ್ಕ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಐತಿಹಾಸಿಕ ಮೈಲಿಗಲ್ಲಾಗಿದೆ. ಈ ಸೇವೆಯನ್ನು ಕ್ಷೇತ್ರದ ಜನತೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದ್ದಾರೆ.