

ಬೀದರ್: ಕರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಬೀದರ್-ಯಶವಂತಪುರ (ಬೆಂಗಳೂರು) ರೈಲು ಓಡಾಟಕ್ಕೆ ಮತ್ತೆ ಹಸಿರು ನಿಶಾನೆ ಸಿಕ್ಕಿದ್ದು, ಸಾರ್ವಜನಿಕರು ಸದುಪಯೋಗ ಪಡೆಯಬೇಕೆಂದು ಸಂಸದ ಭಗವಂತ ಖೂಬಾ ಕೋರಿದ್ದಾರೆ.
ಜಿಲ್ಲೆಯ ಜನರಿಗೆ ಅನುಕೂಲವಾಗಲಿ ಎಂದು ಕಳೆದ ಅವಧಿಯಲ್ಲಿ ಬೀದರ್-ಯಶವಂತಪುರ ರೈಲನ್ನು ವಾರವಿಡೀ ಚಲಿಸುವಂತೆ ಮಾಡಿಸಿದ್ದು, ಸದುಪಯೋಗ ಪಡೆದುಕೊಳ್ಳುತ್ತಿದ್ದರು. ಆದರೆ ಕರೊನಾ ಲಾಕ್ ಡೌನ್ ನಿಂದಾಗಿ ಎಲ್ಲ ರೈಲು ಸೇವೆ ಸ್ಥಗಿತಗೊಂಡಿದ್ದವು. ಕ್ರಮೇಣ ಕೆಲವೆಡೆ ರೈಲು ಓಡಾಟ ಶುರುವಾದ ಹಿನ್ನೆಲೆಯಲ್ಲಿ ಈ ರೈಲನ್ನು ಸಹ ಆರಂಭಿಸಬೇಕೆಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಲಾಗಿತ್ತು. ರೈಲ್ವೆ ಮಂಡಳಿ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಇದರ ಫಲವಾಗಿ ಅನುಮತಿ ದೊರೆತಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ನ.17ರಂದು ಯಶವಂತಪುರ-ಬೀದರ್ (ರೈಲು ಸಂಖ್ಯೆ 06271) ಮತ್ತು ನ.18ರಂದು ಬೀದರ್-ಯಶವಂತಪುರ (06272) ರೈಲು ಸಂಚರಿಸಲಿದೆ (ವಾರಕ್ಕೆ 4 ದಿನ). ಬೀದರ್ ಮಾರ್ಗವಾಗಿ ಯಶವಂತಪುರ-ಲಾತೂರ್ (06583) ಹಾಗೂ ಲಾತೂರ್-ಯಶವಂತಪುರ (ವಾರಕ್ಕೆ 3 ದಿನ) ಸಂಚರಿಸಲಿದೆ. ವಾರ ಪೂರ್ತಿ ಮೊದಲಿನ ಸಮಯದಂತೆ ರೈಲು ಚಲಿಸಲಿದೆ ಎಂದು ವಿವರಿಸಿದ್ದಾರೆ.