ಬೀದರ್ ಬೆಡಗಿ ಮಿಸೆಸ್ ಕ್ವೀನ್

Aruna Patil
Published on

ಬೀದರ್: ಗ್ಲೋಬಲ್ ಪೇಜೆಂಟ್ ಸಂಸ್ಥೆಯಿಂದ ಇತ್ತೀಚೆಗೆ ನವದೆಹಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಬೀದರ್ ಮೂಲದ ಬೆಡಗಿಗೆ ಮಿಸೆಸ್ ಕ್ವೀನ್ ಆಫ್ ಇಂಡಿಯಾ ಕಿರೀಟ ಒಲಿದಿದೆ.

ಇಲ್ಲಿನ ಕಾಂಗ್ರೆಸ್ ಹಿರಿಯ ಮುಖಂಡ ರಾಜಶೇಖರ ಪಾಟೀಲ್ ಅಷ್ಟೂರ್ ಅವರ ಪುತ್ರಿ ಅರುಣಾ ಈ ಕೀರ್ತಿಗೆ ಭಾಜನರಾಗಿದ್ದಾರೆ. ಹುಬ್ಬಳ್ಳಿ ಮೂಲದ ಕ್ಯಾಪ್ಟನ್ ಪ್ರವೀಣ ಜತೆ ಅರುಣಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ನವದೆಹಲಿಯಲ್ಲಿ ಸಂಘಟಿಸಿದ್ದ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ 29 ಸುಂದರಿಯರನ್ನು ಹಿಂದಿಕ್ಕಿ ಅರುಣಾ ಈ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ದೇಶದ ಎಲ್ಲ ರಾಜ್ಯಗಳಿಂದ 29 ಸ್ಪರ್ಧಿಗಳು ಅಂತಿಮ ಹಂತದೊಳಗೆ ಭಾಗವಹಿಸಿದ್ದರು. ಕರ್ನಾಟಕದಿಂದ ಅರುಣಾ ಪಾಟೀಲ್ ಸ್ಪರ್ಧಿಸಿ ತಮ್ಮ ಸೌಂದರ್ಯ, ಬುದ್ಧಿವಂತಿಕೆ ಹಾಗೂ ಮಾತಿನ ಮೋಡಿ ಮೂಲಕ ಮಿಸೆಸ್ ಕ್ವೀನ್ ಆಫ್ ಇಂಡಿಯಾ ಕಿರೀಟ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಿಸೆಸ್ ಕ್ವೀನ್ ಆಫ್ ಇಂಡಿಯಾ ಸ್ಪರ್ಧೆಯು ಸಾಂಪ್ರದಾಯಿಕ ಸೌಂದರ್ಯ, ಬುದ್ಧಿವಂತಿಕೆ ಹಾಗೂ ಸೂಕ್ಷ್ಮತೆ ಆಧರಿತವಾಗಿತ್ತು. ಮಹಿಲಾ ಸಮುದಾಯ, ದೇಶ ಹಾಗೂ ಸಮಕಾಲೀನ ಜೀವನಕ್ಕೆ ನೀಡಿದ ಕೊಡುಗೆಯನ್ನೂ ಪರಿಗಣಿಸಲಾಗುತ್ತದೆ. ಜಗತ್ತಿಗೆ ಪ್ರೇರಣೆ ನೀಡುವ ಪರಿಪೂರ್ಣ ಮಹಿಳೆಯನ್ನು ಗುರುತಿಸುವುದು ಸ್ಪರ್ಧೆ ಉದ್ದೇಶವಿತ್ತು. ಸ್ಪರ್ಧೆಯ ವಿಜೇತರು ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆಯುವುದು ವಿಶೇಷ.

ಸ್ಪರ್ಧೆಯಲ್ಲಿ ಅರುಣಾ ಅವರು ಮಹಿಳೆ ಪ್ರತಿ ಕ್ಷೇತ್ರದಲ್ಲೂ ಪುರುಷರಿಗೆ ಸರಿ ಸಮನಾಗಿರುವುದನ್ನು ಉದಾಹರಣೆ ಸಹಿತ ವಿವರಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ನವದೆಹಲಿಯ ದಿ ಸೂರ್ಯ ಹೊಟೇಲ್ನಲ್ಲಿ ಆಯೋಜಿಸಿದ ವರ್ಣರಂಜಿತ ಸಮಾರಂಭದಲ್ಲಿ ಅರುಣಾ ಅವರಿಗೆ ಗ್ಲೋಬಲ್ ಪೇಜೆಂಟ್ ಸಿಇಒ ಶ್ವೇತಾ ಅವರು ಕಿರೀಟ ತೊಡಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ಅರುಣಾ ಅವರ ಪತಿ ಪ್ರವೀಣ ತುಂಬಗಿ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಂಪ್ಯೂಟರ್ ಇಂಜಿನಿಯರ್ ಓದಿರುವ ಅರುಣಾ ಅವರು, ಮೊದಲಿನಿಂದಲೂ ವಿವಿಧ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು. ಶಿಕ್ಷಣ ಮುಗಿಯುತ್ತಲೇ ಕ್ಯಾಪ್ಟನ್ ಪ್ರವೀಣ ಜತೆ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ಪತಿಯ ಪ್ರೋತ್ಸಾಹ ಹಾಗೂ ತಂದೆ ರಾಜಶೇಖರ ಪಾಟೀಲ್ ಸೇರಿದಂತೆ ತವರು ಮನೆಯ ಸಹಕಾರದ ಪರಿಣಾಮವಾಗಿ ನಾನು ಮಿಸೆಸ್ ಕ್ವೀನ್ ಆಫ್ ಇಂಡಿಯಾ ಕಿರೀಟ ಧರಿಸಿರುವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅರುಣಾ.

ಪುತ್ರಿ ಅರುಣಾಗೆ ಪ್ರಶಸ್ತಿ ದೊರೆತಿರುವುದು ಅತೀವ ಖುಷಿ ತಂದಿದೆ. ಇದು ಬೀದರ್ ಅಷ್ಟೇ ಅಲ್ಲ, ಇಡೀ ಕರ್ನಾಟಕಕ್ಕೆ ಸಂದ ಗೌರವ. ಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆ ಇರಲಿದೆ. ಶೀಘ್ರದಲ್ಲಿ ದಿನಾಂಕ ಹಾಗೂ ಸ್ಥಳ ಅಂತಿಮವಾಗಲಿದೆ. ಅಲ್ಲಿಯೂ ಪುತ್ರಿ ಗೆಲುವು ಸಾಧಿಸುವ ಆಶಾಭಾವ ಇದೆ.| ರಾಜಶೇಖರ ಪಾಟೀಲ್ ಅಷ್ಟೂರ್,ಅರುಣಾ ತಂದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net